ಇವ ನಮ್ಮವ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹ

KannadaprabhaNewsNetwork |  
Published : Mar 28, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ      | Kannada Prabha

ಸಾರಾಂಶ

ಇವ ನಮ್ಮವ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಲಾದ "ಇವ ನಮ್ಮವ " ಕಾಯ್ದೆಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ವಕ್ತಾರರು.

ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ , ಲಿಂಗ ತಾರತಮ್ಯ, ಮರ್ಯಾದೆಗೇಡು ಹತ್ಯೆ, ಅಪೌಷ್ಟಿಕತೆ, ಅಭದ್ರತೆ, ಕೌಟುಂಬಿಕ ದೌರ್ಜನ್ಯದಂತಹ ಹಲವಾರು ಸಮಸ್ಯೆಗಳ ವಿರುದ್ಧ ಎಲ್ಲಾ ಸ್ತರದ ಮಹಿಳೆಯರನ್ನು ಸಂಘಟಿಸಲಾಗುತ್ತಿದೆ. ಕರ್ನಾಟಕದಲ್ಲೂ ಕೂಡಾ ನಿರಂತರವಾಗಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಪರಿಣಾಮ ಇವ ನಮ್ಮವ ಕಾಯ್ದೆ ಜಾರಿಗೆ ಬಂದಿದೆ. ಇದು ಕೇವಲ ಕಾಯ್ದೆಯಾಗಿ ಉಳಿಯಬಾರದೆಂದು ವಿನಂತಿಸಿದರು.

ರಾಜ್ಯದಲ್ಲಿ ಗಣನೀಯವಾಗಿ ಮಹಿಳೆಯರು-ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಗುಂಪು ಅತ್ಯಾಚಾರ, ಕೊಲೆ, ಮರ್ಯಾದಾಗೇಡು ಹತ್ಯೆ, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯದಂತಹ ಘಟನೆಗಳು ಜನತೆಯನ್ನು ಆಕ್ರೋಶಭರಿತರನ್ನಾಗಿಸಿವೆ. ಕಣ್ಣು ಬಿಡುವ ಮುನ್ನವೇ ಉಸಿರು ನಿಲ್ಲಿಸಿ ತಿಪ್ಪೆಗೆ ಎಸೆಯುವ ಸ್ತ್ರೀ ಭ್ರೂಣ ಹತ್ಯೆ ಅವ್ಯಾಹತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವುದು ಸಮಸ್ಯೆಯ ಆಳವನ್ನು ತೋರಿಸುತ್ತದೆ. ಅತ್ಯಾಚಾರ ಮತ್ತು ಗುಂಪು ಅತ್ಯಾಚಾರ ಪ್ರಕರಣಗಳು 2023ರಲ್ಲಿ 600, 2024 ರಲ್ಲಿ 739 ಕೇಸುಗಳು ಹಾಗೂ 2025 ರ ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 927 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲೇ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದು ಆತಂಕಕಾರಿಯಾಗಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ. 2025 ರ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ 43 ಸಾವಿರಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೂ ಆಡಿ ನಲಿಯಬೇಕಿದ್ದ ಎಳೆಯ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳು ಶೇಕಡಾ 26 ರಷ್ಟು ಹೆಚ್ಚಾಗಿವೆ. ಅದರಂತೆ ದಾಖಲಾದ ಅರ್ಧದಷ್ಟು ಪ್ರಕರಣಗಳು ಖುಲಾಸೆಯಾಗುತ್ತಿವೆ. 2022 ರಲ್ಲಿ ದಾಖಲಾದ 3209 ಪ್ರಕರಣಗಳಲ್ಲಿ1562 ಪ್ರಕರಣಗಳು ಖುಲಾಸೆಯಾಗಿವೆ, 1224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ, ಇನ್ನು ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು, ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರು ಭಾಗಿಯಾಗಿರುವುದು ನಾಡಿನ ದುರಂತ‍ವಾಗಿದೆ.

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು, ಸರ್ಕಾರಿ ಶಾಲೆಗಳನ್ನು ಬಲಪಡಿಸಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಅಶ್ಲೀಲತೆಯ ಪ್ರಚಾರ, ಮದ್ಯ-ಮಾದಕ ವಸ್ತುಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರ ವಾಗುವ ಅಶ್ಲೀಲ ಹಾಗೂ ಕ್ರೌರ್ಯ ತುಂಬಿದ ಐಟಂ ಹಾಡುಗಳಿಗೆ ಕಡಿವಾಣ ಹಾಕಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಸಂಘಟನೆಯ ಸುಜಾತಾ,ಕುಮುದಾ ಈ ವೇಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಗಣತಿ 2027ಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜೆ