ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ

KannadaprabhaNewsNetwork |  
Published : May 03, 2026, 02:00 AM IST
ಪೊಟೋ: 30ಎಸ್‌ಎಂಜಿಕೆಪಿ07ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿದರು. | Kannada Prabha

ಸಾರಾಂಶ

ಮಧ್ಯ ಕರ್ನಾಟಕ ಗುಂಪು ಜಿಲ್ಲೆಗಳಿಗೆ ಅನ್ವಯವಾಗುವಂತೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಧ್ಯ ಕರ್ನಾಟಕ ಗುಂಪು ಜಿಲ್ಲೆಗಳಿಗೆ ಅನ್ವಯವಾಗುವಂತೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯ ಕರ್ನಾಟಕ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಉಡುಪಿ ಭೌಗೋಳಿಕವಾಗಿ ಹೊಂದಿಕೊಂಡಿವೆ. ಇತ್ತೀಚೆಗೆ ಜನಸಂಖ್ಯೆಯೂ ಹೆಚ್ಚಿದೆ. ಕೋರ್ಟ್‌ಗಳಲ್ಲಿ ಕೇಸುಗಳ ಸಂಖ್ಯೆಯೂ ಹೆಚ್ಚಾಗಿದೆ. ಹಲವು ವರ್ಷಗಳಿಂದ ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬುದು ಸಾರ್ವಜನಿಕರ ಮತ್ತು ನಮ್ಮೆಲ್ಲರ ಆಶಯವಾಗಿದೆ. ಇದಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನಾ ಹೋರಾಟ ಸಮಿತಿ ರಚನೆಯಾಗಿದ್ದು, ಆ ಮೂಲಕ ಎಲ್ಲಾ ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಮತ್ತು ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು ಈ ಹೋರಾಟ ಆರಂಭಿಸುತ್ತಿದ್ದೇವೆ ಎಂದರು.

ಈಗಾಗಲೇ ಒಂದು ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರಾವಳಿ ಸಂಚಾರಿ ಪೀಠ ಸ್ಥಾಪನೆಯಾಗಬೇಕೆಂಬ ಒತ್ತಾಯ ಪ್ರಾರಂಭವಾಗಿದೆ. ಇದಕ್ಕಾಗಿ ಜಾಗ ಕೂಡ ಗುರುತಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಜನರ ಅಭಿಪ್ರಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಂಚಾರಿ ಪೀಠಕ್ಕೆ ಶಿವಮೊಗ್ಗ ಜಿಲ್ಲೆಯನ್ನು ಸೇರಿಸಿರುವುದು ಸರಿಯಲ್ಲ. ಇದನ್ನು ನಾವು ಒಪ್ಪುವುದೂ ಇಲ್ಲ. ಇದಕ್ಕಾಗಿ ಯಾರ ಅಭಿಪ್ರಾಯವನ್ನೂ ಅವರು ಕೇಳಿಲ್ಲ. ಒಂದು ಪಕ್ಷ ಶಿವಮೊಗ್ಗ ಜಿಲ್ಲೆಯನ್ನು ಸೇರಿಸುವುದಾದರೆ ನಮ್ಮ ವಿರೋಧವಿದೆ ಎಂದರು.

ಮಧ್ಯ ಕರ್ನಾಟಕ ಭಾಗವು 1956ರಿಂದಲೇ ವಂಚಿತಗೊಂಡಿದೆ. ಆದ್ದರಿಂದ ನಾವು ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಇತ್ತೀಚೆಗೆ ಭೇಟಿಯಾಗಿ ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪಿಸುವಂತೆ ಬೇಡಿಕೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳಿಗೂ ನಾವು ಮನವಿ ಮಾಡುತ್ತಿದ್ದೇವೆ. ಯಾವುದೇ ಒಂದು ಸಂಚಾರಿ ಪೀಠ ಸ್ಥಾಪನೆಯಾಗಲು ಜಸ್ವಂತ್ ಸಿಂಗ್ ಕಮಿಷನ್ ಶಿಫಾರಸು ಆಧಾರದಲ್ಲಿ ಆಗಬೇಕು. ಈ ಶಿಫಾರಸಿನಂತೆ ಮಧ್ಯಕರ್ನಾಟಕ ಭಾಗ ಸರಿಯಾದ ವ್ಯವಸ್ಥಿತ ಪೀಠ ಸ್ಥಾಪಿಸಲು ಯೋಗ್ಯವಾಗಿದೆ ಎಂದರು.

ಕರಾವಳಿ ಜಿಲ್ಲೆಯಲ್ಲಿ ಪೀಠ ಸ್ಥಾಪನೆಗೆ ಶಿವಮೊಗ್ಗ ಜನರನ್ನಾಗಲಿ ಜನಪ್ರತಿನಿಧಿಯನ್ನಾಗಲೀ, ವಕೀಲರನ್ನಾಗಲಿ ಯಾರ ಸಂಪರ್ಕವನ್ನೂ ಮಾಡಿಲ್ಲ. ಅಭಿಪ್ರಾಯವನ್ನು ಪಡೆದಿರುವುದಿಲ್ಲ. ಅಲ್ಲದೆ ಶಿವಮೊಗ್ಗ ಜಿಲ್ಲೆ ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಭೌಗೋಳಿಕ ಹೊಂದಾಣಿಕೆ ಕೂಡ ಇರುವುದಿಲ್ಲ ಎಂದರು.

ಈಗಾಗಲೇ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಜಿಲ್ಲಾ ಕಾರ್ಮಿಕರ ಸಂಘ, ವಿದ್ಯಾರ್ಥಿಗಳು, ಪತ್ರಕರ್ತರ ಸಂಘ, ಛೇಂಬರ್ ಆಫ್ ಕಾಮರ್ಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಮಂಡಿ ಮರ್ಚೆಂಟ್ಸ್, ಕಾರ್ಮಿಕರ ಸಂಘಗಳು, ಆಟೋ ಚಾಲಕರ ಸಂಘ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಸಂಪರ್ಕದೊಂದಿಗೆ ಎಲ್ಲರೊಡನೆ ಚರ್ಚಿಸಿ ಎಲ್ಲರ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಜನಪ್ರತಿನಿಧಿಗಳನ್ನು ಜೊತೆಯಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯಪಾಲರನ್ನು ಸಂಪರ್ಕಿಸಿ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಒಂದು ಬಹುದೊಡ್ಡ ಹೋರಾಟವನ್ನೇ ನಾವು ಮಾಡಲಿದ್ದೇವೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಜಿ.ರಾಘವೇಂದ್ರಸ್ವಾಮಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಪೀಠ ಸ್ಥಾಪನೆಯಾಗುವುದರಿಂದ ಮಧ್ಯಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಆಗುವುದರಿಂದ ಎಲ್ಲಾ ರೀತಿಯ ಅನುಕೂಲಗಳು ಆಗಲಿವೆ. ಮಂಗಳೂರು ಮತ್ತು ಬೆಂಗಳೂರು ನಮಗೆ ದೂರವಾಗಿದೆ. ಈಗಾಗಲೇ ಗುಲ್ಬರ್ಗಾದಲ್ಲಿ ಶಾಶ್ವತ ಪೀಠ ಇದೆ. ಉತ್ತರ ಕರ್ನಾಟಕಕ್ಕೆ ಸಂಚಾರಿ ಪೀಠ ಇದೆ. ಆದರೆ ಮಧ್ಯಕರ್ನಾಟಕಕ್ಕೆ ಇಲ್ಲ. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ನಮ್ಮ ಹೋರಾಟದ ಹೆಜ್ಜೆಯನ್ನು ಇಟ್ಟಿದ್ದೇವೆ, ಎಲ್ಲರೂ ಒಟ್ಟಾಗಿ ಇದಕ್ಕಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಎ.ಗೋಪಿಕೃಷ್ಣ, ಕೆ.ವಾಸುದೇವಮೂರ್ತಿ, ಎಸ್.ಎ.ಶ್ರೀನಿವಾಸ್, ತಿಲಕ ಮಧುಸೂದನ, ಅತಾವುಲ್ಲಾ ಖಾನ್, ಶ್ವೇತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಯುರ್ವೇದ-ಯೋಗಕ್ಕೆ ಜಾಗತಿಕ ಮಾನ್ಯತೆ
ಏರುತ್ತಿದೆ ತಾಪಮಾನ: ಹೀಟ್‌ಸ್ಟ್ರೋಕ್‌ ವಾರ್ಡ್‌ ಸ್ಥಾಪನೆ!