ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಪ್ರವಾಸಿಮಂದಿರದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಬಿ.ಹೆಚ್ ರಸ್ತೆ ಹಾಸನ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಪಿ.ಪಿ. ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡ ಗುತ್ತಿನಕೆರೆ ಶಿವಮೂರ್ತಿ ಮಾತನಾಡಿ, ದೇಶದ ಸಂವಿಧಾನ ನೀಡಿರುವ ಮೀಸಲಾತಿ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರ ಅಂಕಿತ ಪಡೆದಿರುವುದು ಮಾದಿಗ ಸಮುದಾಯವು 35 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ದೊರೆತ ಮಹತ್ವದ ಜಯವಾಗಿದೆ ಎಂದು ತಿಳಿಸಿದರು. ಈ ಹೋರಾಟವು ಸಂವಿಧಾನದ ವಿಧಿ 15(4) ಮತ್ತು 16(4) ರ ಆತ್ಮವನ್ನು ಉಳಿಸುವ ಹೋರಾಟವಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಖಾಲಿ ಹುದ್ದೆಗಳ ಭರ್ತಿಯಲ್ಲಿ 15% ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಜೊತೆಗೆ ನಾಗಮೋಹನ್ ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಉಪವರ್ಗೀಕರಣವನ್ನು ಜಾರಿಗೊಳಿಸಿ ಪರಿಷ್ಕೃತ ರೋಸ್ಟರ್ ವ್ಯವಸ್ಥೆಯನ್ನು ಪ್ರಕಟಿಸುವಂತೆ ಒತ್ತಾಯಿಸಿದರು.ರಾಜ್ಯದಲ್ಲಿ ಜಾರಿಯಲ್ಲಿರುವ 56% ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದ ಮುಂದೆ 6.56% ಮೀಸಲಾತಿ ಪ್ರಮಾಣವನ್ನು ಸಮರ್ಥವಾಗಿ ಪ್ರತಿಪಾದಿಸಬೇಕು ಎಂಬುದು ಮೀಸಲಾತಿಯಿಂದ ವಂಚಿತವಾಗಿರುವ ಮಾದಿಗ ಸಮುದಾಯದ ನ್ಯಾಯಸಮ್ಮತ ಹಕ್ಕೊತ್ತಾಯವಾಗಿದೆ ಎಂದು ಹೇಳಿದರು.
ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಎಂ.ಜೆ. ಸಂತೋಷ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡ ಎಂ. ಎನ್. ಶೇಖರಪ್ಪ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷ ಎನ್. ಕೆಂಚಪ್ಪ, ಗೌರವಾಧ್ಯಕ್ಷ ಅಟಿಗಯ್ಯ, ಅಗ್ಗುಂದ ಎ.ಪಿ. ಚಂದ್ರಯ್ಯ, ಚಿಕ್ಕ ಬಾಣಾವರ ವೆಂಕಟೇಶ್, ಕರಿಯಪ್ಪ, ಭಾಸ್ಕರ್, ಜಾಜೂರು ಹನುಮಂತ, ಗುರುಮೂರ್ತಿ, ರುದ್ರೇಶ್, ಮಲ್ಲದೇವರಹಳ್ಳಿ ಮಂಜುನಾಥ್, ಹುಲಿಯಪ್ಪ, ಕರಗುಂದ ಧನಂಜಯ, ಜಾಜೂರು ಬಸವರಾಜು ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬಂದ ನೂರಾರು ಜನರು ಭಾಗವಹಿಸಿದ್ದರು.