ಕಾಫಿ ಬೆಳೆಗಾರರ ಕೃಷಿ ಸಾಲ ಮನ್ನಾ ಮಾಡಲು ಆಗ್ರಹ

KannadaprabhaNewsNetwork | Published : Apr 12, 2024 1:02 AM

ಸಾರಾಂಶ

ಕಾಫಿ ಬೆಳೆಗಾರರ ಹಾಲಿ ಒಂದು ವರ್ಷದ ಕೃಷಿ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ. ಪ್ರಸಕ್ತ ವರ್ಷ ಶೇ. 40 ರಷ್ಟು ಕಾಫಿ ಫಸಲು ನಷ್ಟವಾಗಿದೆ. ಮುಂದಿನ ವರ್ಷದ ಫಸಲಿಗೆ ಹಾನಿಯಾಗಿದೆ. ಕಾಫಿ ತೋಟದ ನಿರ್ವಹಣೆ ಅಸಾಧ್ಯವೆನಿಸಿದೆ. ಕಾಫಿ ತೋಟಗಳು ರೋಗಪೀಡಿತವಾಗಿದೆ ಎಂದು ಸಂಘ ತಿಳಿಸಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಅಕಾಲಿಕ ಮಳೆ, ಹವಮಾನ ವೈಪ್ಯರೀತ್ಯ, ಬರದಿಂದ ಕಾಫಿ ಫಸಲು ಹಾನಿಯಾಗಿದ್ದು, ಕಾಫಿ ಬೆಳೆಗಾರರ ಹಾಲಿ ಒಂದು ವರ್ಷದ ಕೃಷಿ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.

ಪ್ರಸಕ್ತ ವರ್ಷ ಶೇ. 40 ರಷ್ಟು ಕಾಫಿ ಫಸಲು ನಷ್ಟವಾಗಿದೆ. ಮುಂದಿನ ವರ್ಷದ ಫಸಲಿಗೆ ಹಾನಿಯಾಗಿದೆ. ಕಾಫಿ ತೋಟದ ನಿರ್ವಹಣೆ ಅಸಾಧ್ಯವೆನಿಸಿದೆ. ಕಾಫಿ ತೋಟಗಳು ರೋಗಪೀಡಿತವಾಗಿದೆ. ಬಹುತೇಕ ಬೆಳೆಗಾರರು ಸಾಲಗಾರರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಅರೇಬಿಕ ಕಾಫಿಯನ್ನು ಅತೀಹೆಚ್ಚು ಬೆಳೆಯಲಾಗುತ್ತಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಕೂಲಿ ಕಾರ್ಮಿಕರ ಕೊರತೆಯಿದೆ. ಕಾರ್ಮಿಕರೇ ಸಂಬಳವನ್ನು ನಿಗದಿ ಮಾಡುತ್ತಿದ್ದಾರೆ. ಬೆಳೆಗಾರರು ನಿಜವಾಗಿಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಬೆಲೆ ತೃಪ್ತಿಕರವಾಗಿದೆ. ಆದರೆ ಫಸಲು ಇಲ್ಲದಿರುವುದರಿಂದ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ಸಹಕಾರ ಸಂಘ ಹಾಗು ರಾಷ್ಟ್ರೀಕೃತ ಬ್ಯಾಂಕ್‍ಗಳ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಸಣ್ಣ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬೆಳೆಗಾರರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು. ಈಗ ಸುಡುಬಿಸಿಲು ಇದೆ. ಕಾಫಿ ಗಿಡಗಳು ಒಣಗಿ ಸಾಯುತ್ತಿವೆ. ಏಪ್ರಿಲ್‍ನಲ್ಲಿ ನೀರು ಕೊಡಬೇಕು. ಹೊಳೆಗಳಲ್ಲಿ ಪಂಪ್‍ಸೆಟ್ ಮೂಲಕ ನೀರು ತೆಗೆಯುವುದಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿದ್ದಾರೆ. ಕಾಫಿ ಬೆಳೆಗಾರರನ್ನು ಸರ್ಕಾರ ರಕ್ಷಣೆ ಮಾಡದಿದ್ದರೆ, ಕಾಫಿ ಉದ್ದಿಮೆ ನಶಿಸಿ ಹೋಗಲಿದೆ. ಮುಂದಿನ ದಿನಗಳಲ್ಲಿ ಕಾಫಿಗೆ ಕೊಡಗಿನ ಕಿತ್ತಳೆಯ ದುಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಬೆಳೆಗಾರರ ಸಮಸ್ಯೆಯನ್ನು ಚರ್ಚಿಸಲು ಏ.15ರಂದು ಪತ್ರಿಕಾಭವನದಲ್ಲಿ ಬೆಳಗ್ಗೆ 10ಗಂಟೆಗೆ ಬೆಳೆಗಾರರ ಕುಂದುಕೊರತೆ ಸಭೆ ಕರೆಯಲಾಗಿದೆ. ತಾಲೂಕಿನ ಗ್ರಾಮಗಳ ಅಧ್ಯಕ್ಷರಿಗೆ ಪತ್ರ ಕಳುಹಿಸಿದ್ದೇವೆ. ಎಲ್ಲರೂ ಸಭೆಯಲ್ಲಿ ಭಾಗವಹಿಸಬೇಕು ಎಂದರು. ಬೆಳೆಗಾರರು ಸಾಲಗಾರರಾಗಿದ್ದಾರೆ. ಮರಕಪಾತು ಸಂದರ್ಭದಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಇದರಿಂದ ಕಾರ್ಮಿಕರ ಕುಟುಂಬಕ್ಕೆ ಸಮಸ್ಯೆಯಾಗುತ್ತಿದೆ. ಕಾರ್ಮಿಕರು ವಾರ್ಷಿಕ 500 ರು. ಗಳ ಪ್ರಿಮಿಯಮ್ ಕಟ್ಟಿದರೆ, 10 ಲಕ್ಷ ರು. ವಿಮಾ ಪರಿಹಾರ ಸಿಗುತ್ತಿದೆ. ಸ್ಥಳೀಯ ಅಂಚೆ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಹೇಳಿದರು.ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್.ಎನ್.ಸೋಮಶೇಖರ್, ಬಿ.ಜಿ.ಪೂವಮ್ಮ, ವರಲಕ್ಷ್ಮೀ ಸಿದ್ದೇಶ್ವರ ಇದ್ದರು.

Share this article