ಕನ್ನಡಪ್ರಭ ವಾರ್ತೆ ವಿಜಯಪುರ
ಸುಳ್ಳು ಹೇಳುವವರನ್ನು ನಂಬದೇ ಸತ್ಯದ ಪರ ಇರುವವರಿಗೆ ಮತಹಾಕಿ ಗೆಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತದಾರರಿಗೆ ಕರೆ ನೀಡಿದರು.ವಿಜಯಪುರ ನಗರದಲ್ಲಿ ನಡೆದ ನಾಗಠಾಣ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೊ. ರಾಜು ಆಲಗೂರ ಎರಡು ಬಾರಿ ಶಾಸಕರಾಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಟ್ಟಾ ಕಾಂಗ್ರೆಸ್ಸಿಗರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಸಲ ಜೆಡಿಎಸ್‌ಗೆ ಟಿಕೆಟ್ ನೀಡಿದ ಹಿನ್ನೆಲೆ ಆಲಗೂರ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಈ ಬಾರಿ ಒಮ್ಮತದ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಶಾಸಕರಾಗಿ ವಿಧಾನಸಭೆಯಲ್ಲಿ ಮಾಡಿದಂತೆ ಲೋಕಸಭೆಯಲ್ಲಿ ವಿಜಯಪುರದ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಅವರು ಯಾವುದೇ ಕೆಲಸ ಮಾಡಿಲ್ಲ. ರೈಲ್ವೆ ಮೇಲ್ಸೇತುವೆ ಕುರಿತು ಅವರು ಪ್ರಸ್ತಾಪಿಸುತ್ತಾರೆ. ಆದರೆ, ಈ ರೈಲ್ವೆ ಮೇಲ್ಸೇತುವೆಯಲ್ಲಿ ರಾಜ್ಯ ಸರ್ಕಾರವೂ ಶೇ.50 ರಷ್ಟು ಅನುದಾನ ನೀಡುತ್ತದೆ ಎಂದು ಹೇಳಿದರು.2014ರಲ್ಲಿ ಮೋದಿ ದೊಡ್ಡ ಬದಲಾವಣೆ ತರುವುದಾಗಿ ಪ್ರಚಾರ ಮಾಡಿದರು. ಆದರೆ, ಕಪ್ಪು ಹಣ ವಾಪಸ್ ತರುವುದು ಸೇರಿದಂತೆ ಯಾರ ಅಕೌಂಟಿಗೂ ₹15 ಲಕ್ಷ ಹಾಕಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ನೋಟ್ ಬ್ಯಾನ್‌ನಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತೆ ಮಾಡಿದರು ಎಂದು ಹೇಳಿದರು.
ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಟೀಕಿಸುವ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪ್ರವಾಸಿ ತಾಣವಾಗಿರುವ ವಿಜಯಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಂಸದರು ಯಾವುದೇ ಕೆಲಸ ಮಾಡಿಲ್ಲ. ಮೂರು ಅವಧಿಯಲ್ಲಿ ಸಂಸದರ ಅಭಿವೃದ್ಧಿ ಶೂನ್ಯವಾಗಿದೆ. ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳಿಲ್ಲ. ಬಿಜೆಪಿ ಸಂಸದರು ಪ್ರಧಾನಿ ಮೋದಿ ಎದುರು ಮಾತನಾಡುವುದಿಲ್ಲ. ಜಲಸಂಪನ್ಮೂಲ ಸಚಿವರಾಗಿ ಎಂ. ಬಿ. ಪಾಟೀಲ ಮಾಡಿರುವ ಯೋಜನೆಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿ ನೀರಿನ ಬವಣೆ ತಪ್ಪಿದೆ. ನೀರಿಗಾಗಿ ಮತ ಹಾಕಿ. ಪ್ರೊ. ರಾಜು ಆಲಗೂರ ಮತದಾರರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಮತ ಕೇಳುವ ನೈತಿಕತೆ ನನಗಿದೆ. ಆದರೆ, ಬಿಜೆಪಿಯವರಿಗೆ ಮತ ಕೇಳುವ ನೈತಿಕತೆ ಇಲ್ಲ. 2013ರಿಂದ 2018ರ ಅವಧಿಯಲ್ಲಿ ಜಿಲ್ಲೆಯಲ್ಲಿ ಎಂ. ಬಿ. ಪಾಟೀಲ ನೀರಾವರಿ ಮಾಡಿದ್ದಾರೆ. ಎಂಬಿಪಿ ಅವರ ಅಭಿವೃದ್ಧಿ ಯೋಜನೆಗಳು ನನ್ನ ಕೈಹಿಡಿಯಲಿವೆ ಎಂದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್.ಲೋಣಿ, ಮುಖಂಡರಾದ ಎಂ.ಆರ್.ಪಾಟೀಲ, ಡಿ.ಎಲ್.ಚವ್ಹಾಣ ಮಾತನಾಡಿದರು.ಕಾಂಗ್ರೆಸ್ ಮುಖಂಡರಾದ ಅಬ್ಗುಲ್ ಹಮೀದ ಮುಶ್ರಿಫ್, ಡಾ. ಗಂಗಾಧರ ಸಂಬಣ್ಣಿ, ಷಹಜಹಾನ ಮುಲ್ಲಾ, ಶ್ರೀದೇವಿ ಉತ್ಲಾಸರ, ಎಂ. ಆರ್. ಪಾಟೀಲ, ಷಹಜಹಾನ್ ದುಂಡಸಿ ಮುಂತಾದವರು ಉಪಸ್ಖಿತರಿದ್ದರು. ಸುರೇಶ ಬಿಜಾಪೂರ ಕಾರ್ಯಕ್ರಮ ನಿರೂಪಿಸಿದರು.