ಬೆಳೆ ಹಾನಿ ಪರಿಶೀಲನೆಗೆ ಶಾಶ್ವತ ಕೋಶ ರಚನೆಗೆ ಆಗ್ರಹ

KannadaprabhaNewsNetwork |  
Published : Jan 10, 2025, 12:46 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲೆಯಲ್ಲಿನ ಬೆಳೆ ಹಾನಿ ಪರಿಶೀಲನೆಗೆ ಸಂಬಂಧಿಸಿದಂತೆ ಶಾಶ್ವತ ಕೋಶ ರಚನೆಗೆ ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯಲ್ಲಿನ ಬೆಳೆ ಹಾನಿ ಪರಿಶೀಲನೆಗೆ ಸಂಬಂಧಿಸಿದಂತೆ ಶಾಶ್ವತ ಕೋಶ ರಚನೆಗೆ ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಡಿಸಿ ಕಚೇರಿ ಬಳಿ ಸಭೆ ನಡೆಸಿದರು. ಚಿತ್ರದುರ್ಗ ಜಿಲ್ಲೆ ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು ಹವಾಮಾನ ವೈಪರಿತ್ಯದಿಂದಾಗಿ ರೈತಾಪಿ ಸಮುದಾಯ ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಒಮ್ಮೆ ಅತಿವೃಷ್ಠಿ ಮತ್ತೊಮ್ಮೆ ಅನಾವೃಷ್ಠಿ ಇಲ್ಲಿ ಮಾಮೂಲಾಗಿದ್ದು ರೈತರ ಬದುಕಿನ ಮೇಲೆ ಹೆಚ್ಚು ಪರಿಣಾಮ ಬಿರುತ್ತವೆ. ಹಾಗಾಗಿ ಸೂಕ್ತ ಪರಿಹಾರ ಒದಗಿಸುವ ನಿಟ್ಟನಲ್ಲಿ ಶಾಶ್ವತ ವೇದಿಕೆ ಒದಗಿಸುವುದು ಅನಿವಾರ್ಯವೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಳೆ ಹಾನಿ ಪರಿಶೀಲನೆ ಹಾಗೂ ನಷ್ಟ ಅಂದಾಜಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಶ್ವತ ಕೋಶವೊಂದನ್ನು ರಚಿಸುವ ತುರ್ತು ಅಗತ್ಯವಿದೆ. ಈ ಕೋಶದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ವಿಮಾ ಕಂಪನಿ ಅಧಿಕಾರಿಗಳು ಇರಬೇಕು. ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆದು ಮುಂಗಾರು ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಆದಾಗ ಕೋಶವು ಕಾರ್ಯ ಪಡೆ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ರೈತರಿಂದ ಬಂದ ದೂರುಗಳ ಆಲಿಸಿ ತಕ್ಷಣ ಫೀಲ್ಡ್ ಗೆ ಹೊಗಬೇಕು. ಅಲ್ಲದೇ ತಮ್ಮದೇ ಆದ ನೆಟ್‌ವರ್ಕ್ ಮೂಲಕ ಬೆಳೆ ನಷ್ಟ ಅಂದಾಜಿಸುವ ಪರಿಪಾಟಲು ಇರಬೇಕು. ಸಹಾಯವಾಣಿ ಮೂಲಕ ಕೋಶ ಕಾರ್ಯನಿರ್ವಹಸಬೇಕೆಂದು ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಮಳೆ ಜಾಸ್ತಿಯಾಗಿ ಈರುಳ್ಳಿ ಕೊಳೆತು ಹೋಗಿದೆ. ಈರುಳ್ಳಿ ಬೆಳೆ ನಾಶವ ಖುದ್ದು ಪರಿಶೀಲಿಸಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗಮಸಿದ್ದರು. ಅಲ್ಲದೇ ಕಳಪೆ ಬಿತ್ತನೆ ಬೀಜ ವಿತರಣೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬಿತ್ತನೆ ಮಾಡಲಾದ ತೊಗರಿ ಹೂ ಬಿಟ್ಟು ಕಾಯಿ ಕಟ್ಟದೆ ಹಾಗೆ ಉಳಿದಿದೆ. ಪರಿಣಾಮ ರೈತ ನಷ್ಟ ಅನುಭವಿಸುವಂತಾಗಿದೆ.

ಬೆಳೆ ನಷ್ಟ ಪರಿಹಾರ ವಿತರಣೆ ಸಂಬಂಧ ರೈತ ಸಂಘಟನೆಗಳು ಈಗಾಗಲೇ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಪರಿಹಾರ ವಿತರಣೆಯಲ್ಲಿನ ತಾಂತ್ರಿಕ ಲೋಪ ಹಾಗೂ ತಪ್ಪು ನಡೆಯಿಂದಾಗಿ ಬಹಳಷ್ಟು ರೈತರಿಗೆ ಪರಿಹಾರ ವಿತರಣೆಯಾಗಿಲ್ಲ. ರೈತರು ನಿತ್ಯ ಬ್ಯಾಂಕ್ ಖಾತೆ ಪರಿಶೀಲಿಸಿ ಸುಸ್ತಾಗಿದ್ದಾರೆ. ಅಧಿಕಾರಿಗಳ ಮಟ್ಟದಲ್ಲಿ ಆದ ಲೋಪದಿಂದಾಗಿ ಪರಿಹಾರ ವಿತರಣೆಯಾಗಿಲ್ಲ. ಜಿಲ್ಲಾಡಳಿತ ತಕ್ಷಣವೇ ಬೆಳೆ ನಷ್ಟದ ಬಗ್ಗೆ ಪುನರ್ ಪರಿಶೀಲಿಸಿ ಶೀಘ್ರ ಪರಿಹಾರ ವಿತರಿಸಬೇಕು. ಯಾರೊಬ್ಬ ರೈತರೂ ಬೆಳೆ ನಷ್ಟ ಪರಿಹಾರ ವ್ಯಾಪ್ತಿಯಿಂದ ಹೊರಗಿರದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಸ್ಕಾಂ ನವರು ನಿತ್ಯ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿ ಕೆಲವು ಕಡೆ ಆರು ತಾಸು ವಿತರಿಸುತ್ತಿದ್ದಾರೆ. ಇದರಿಂದಾಗಿ ಬೇಸಗೆ ಫಸಲು ಬೆಳೆಯಲು ತೊಂದರೆಯಾಗಿದೆ. ಏಳು ತಾಸು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣದಿಂದ ಪಂಪ್ ಸೆಟ್ಟುಗಳಿಗೆ ಮೀಟರು ಅಳವಡಿಸಬಾರದು. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ರಾಜ್ಯ ಮುಖಂಡರಾದ ಕೆ.ಪಿ.ಭೂತಯ್ಯ, ಕೆ.ಸಿ ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಿರಿಯೂರು ತಾಲೂಕು ಅಧ್ಯಕ್ಷ ಶಿವಕುಮಾರ್,ಲಕ್ಷ್ಮಿಕಾಂತ್, ಯುವ ಘಟಕದ ಅಧ್ಯಕ್ಷ ಆರ್.ಚೇತನ್ ಯಳನಾಡು ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌