ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚನೆಗೆ ಆಗ್ರಹ

KannadaprabhaNewsNetwork | Published : Jun 14, 2024 1:06 AM

ಸಾರಾಂಶ

371 (ಜೆ) ಅಡಿಯಲ್ಲಿ ನಿಜವಾಗ್ಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಪ್ರಗತಿಯ ವೇಗವರ್ಧನೆಯ ಮೇಲುಸ್ತುವಾರಿಗೂ ಈ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಂವಿಧಾನದ ಕಲಂ 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಕಲ್ಯಾಣ ಕರ್ನಾಟಕದ ಪ್ರಗತಿಗೆ ವೇಗ ನೀಡುವ ಗುರಿಯೊಂದಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ರಚನೆ ಮಾಡಬೇಕು, ನೇಮಕಾತಿಯಲ್ಲಿ ಕಕ ಭಾಗದವರಿಗೆ ವಯೋಮಿತಿ ವಿನಾಯ್ತಿ ಕೊಡಬೇಕು, ಕೃಪಾಂಕ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹಾಗೂ ಈ ಭಾಗದ ಮುಖಂಡರು ಆಗ್ರಹಿಸಿದ್ದಾರೆ.

ಇಂದಿಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮೀತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ, ಎಂಎಲ್‌ಸಿ ಶಶಿಲ್‌ ನಮೋಶಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರಕಾರದ ಗಮನ ಸೆಳೆವ ಯತ್ನ ಮಾಡಿದ್ದಾರೆ.

371 (ಜೆ) ಅಡಿಯಲ್ಲಿ ನಿಜವಾಗ್ಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಪ್ರಗತಿಯ ವೇಗವರ್ಧನೆಯ ಮೇಲುಸ್ತುವಾರಿಗೂ ಈ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದರು.

371(ಜೆ) ಕಲಂ ನಿಯಮಾವಳಿಯಂತೆ ನೇಮಕಾತಿಗಳಲ್ಲಿ ಕೃಪಾಂಕ ನೀಡಬೇಕು. ಇದರ ಜೊತೆಗೆ, ಎಲ್ಲರಿಗೂ ನ್ಯಾಯ ದೊರಕುವಂತಾಗಲು ವಯೋಮಾನದಲ್ಲಿ ವಿನಾಯಿತಿ ನೀಡಬೇಕು.371(ಜೆ) ಕಲಂ ಅಡಿ ಬರುವ ವ್ಯಾಜ್ಯಗಳ ನಿವಾರಣೆಗೆ ನಿಯಮದಂತೆ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯುನಲ್ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರದ ಎಲ್ಲಾ ನೇಮಕಾತಿಗಳಿಗೆ ಮೊದಲು ಮೆರಿಟ್ ಮಾನದಂಡದ ಪಟ್ಟಿ ಪ್ರಕಟಿಸಿ ನಂತರ ನಮ್ಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಾನದಂಡ ಅನುಸರಿಸಬೇಕು. ಈಗಾಗಲೇ ಕಲ್ಯಾಣ ಕರ್ನಾಟಕದ ಮತ್ತು ರಾಜ್ಯದ ಇತರೆ ಭಾಗದ ನೂರಾರು ಅರ್ಹ ಅಭ್ಯರ್ಥಿಗಳು ಆಯಾ ಇಲಾಖೆಗಳಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಆದೇಶ ಪತ್ರ ನೀಡದೆ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಭ್ಯರ್ಥಿಗಳಿಗೆ ತಕ್ಷಣ ಸೇವಾ ಆದೇಶ ಪತ್ರ ನೀಡಬೇಕು ಎಂದು ಲಕ್ಷ್ಮಣ ದಸ್ತಿ ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. 1956ರಿಂದ ಇಲ್ಲಿಯವರೆಗೆ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಮತ್ತುಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಒದಗಿಸಲು ಎಲ್ಲ ಇಲಾಖೆಗಳ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನುಡಿದರು.

ಹಿರಿಯ ಚಿಂತಕ ಆರ್.ಕೆ. ಹುಡಗಿ, ಡಾ. ಗುಲಶೆಟ್ಟಿ, ಪ್ರತಾಪಸಿಂಗ್ ತಿವಾರಿ, ಮನಿಷ್‍ಜಾಜು, ಡಾ. ಮಾಜಿದ್‍ದಾಗಿ, ಲಿಂಗರಾಜ ಸಿರಗಾಪುರ, ಶಿವಲಿಂಗಪ್ಪ ಭಂಡಕ, ಜ್ಞಾನಮಿತ್ರ ಸಾಮ್ಯುಯೆಲ್, ಅಸ್ಲಂ ಚೌಂಗೆ ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ದೃಷ್ಟಿಯಿಂದ ಹಾಗೂ 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕದ ಪರಿಣಿತರ, ತಜ್ಞ ಹೋರಾಟಗಾರರ ಸಲಹಾ ಸಮಿತಿ ರಚಿಸಬೇಕು ಎಂದು ಹೋರಾಟಗಾರ ಲಕ್ಷ್ಮಣ ದಸ್ತಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು.

Share this article