ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನಕ್ಕೆ ಒತ್ತಾಯ: ಸಂತೋಷ್ ಬಜಾಲ್

KannadaprabhaNewsNetwork | Published : Mar 27, 2024 1:01 AM

ಸಾರಾಂಶ

ಉಡುಪಿ ಜಿಲ್ಲೆಯ ಶಿಳ್ಳೆಕ್ಯಾತ ಸಮುದಾಯದ ಸಭೆ ಕುಂದಾಪುರದಲ್ಲಿ ನಡೆಯಿತು. ಈ ಸಂದರ್ಭ ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನಕ್ಕೆ ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕುಂದಾಪುರ ತಾಲೂಕಿನ ಹಾಲಾಡಿ, ಕಟ್ ಬೆಳ್ತೂರು, ಬ್ರಹ್ಮಾವರ ತಾಲೂಕು, ಉಡುಪಿ ತಾಲೂಕಿನ ಮಲ್ಪೆ, ಕಾಪು ತಾಲೂಕಿನ ಕಟಪಾಡಿ, ಪಾಂಗಾಳ ಭಾಗದ ನದಿಗಳಲ್ಲಿ ತೆಪ್ಪದಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಅಲೆಮಾರಿ ಬುಡಕಟ್ಟು ಸಮುದಾಯ ಸುಮಾರು 25 ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರ್ಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷ, ಡಿವೈಎಫ್ಐ ರಾಜ್ಯ ಮುಖಂಡ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

ಅವರು ಸೋಮವಾರ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಉಡುಪಿ ಜಿಲ್ಲೆಯ ಶಿಳ್ಳೆಕ್ಯಾತ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹಲವು ವರುಷಗಳಿಂದ ಈ ಕುಟುಂಬಗಳು ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಗಳು ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೇ, ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಈ ಅತೀ ಸೂಕ್ಷ್ಮ ಸಮುದಾಯಕ್ಕೆ ಗುರುತಿನ ಚೀಟಿ ಸಹಿತ ಯಾವುದೇ ದಾಖಲೆಗಳಿಲ್ಲದೆ ಸರ್ಕಾರ ಅಥವಾ ಅಲೆಮಾರಿ ಅಭಿವೃದ್ಧಿ ನಿಗಮದ ಸವಲತ್ತುಗಳು ತಲುಪುತ್ತಿಲ್ಲ. ಇತ್ತೀಚೆಗೆ ತಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶಕ್ಕೆ ಒಂದೇ ಕಡೆ ನೆಲೆಯೂರಲು ಪ್ರಯತ್ನಿಸಿದರೂ ಅದಕ್ಕೆ ಸರ್ಕಾರ ಸ್ಪಂದಿಸದೆ ಅಲೆಮಾರಿ ಸಮುದಾಯಗಳ ವಿರೋಧಿಯಾಗಿ ವರ್ತಿಸುತ್ತಿದೆ ಎಂದವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಸಂಘಟನೆಯ ಮುಂದಾಳುಗಳಾದ ಎಚ್. ನರಸಿಂಹ ಮಾತನಾಡಿದರು. ಜಿಲ್ಲಾ ಮೀನುಗಾರರು ಮತ್ತು ಮೀನು ಕಾರ್ಮಿಕರ ಸಂಘದ ಕಾರ್ಯದರ್ಶಿ ಕವಿರಾಜ್ ಕಾಂಚನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಳ್ಳೆಕ್ಯಾತ ಸಮುದಾಯದ ವೆಂಕಟೇಶ್, ಶಂಕರ, ಲೋಕೇಶ, ರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯನ್ನು ರಚಿಸಲಾಯಿತು. ಇದರ ಗೌರವಾಧ್ಯಕ್ಷರಾಗಿ ಕವಿರಾಜ್ ಕಾಂಚನ್, ಅಧ್ಯಕ್ಷರಾಗಿ ಶಂಕರ, ಕಾರ್ಯದರ್ಶಿ ರಾಮ, ಕೋಶಾಧಿಕಾರಿಯಾಗಿ ಪ್ರಕಾಶ ಅವರನ್ನು ಆಯ್ಕೆಮಾಡಲಾಯಿತು. ಮತ್ತು 25 ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

Share this article