ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ನೀರು: ಸಚಿವ ಪ್ರಿಯಾಂಕ್ ಖರ್ಗೆ

KannadaprabhaNewsNetwork | Published : Mar 27, 2024 1:01 AM

ಸಾರಾಂಶ

ಅಫಜಲ್ಪುರ ತಾಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾರಾಯಣಪುರ ಜಲಾಶಯದಿಂದ ಸೊನ್ನ ಬ್ಯಾರೇಜಿಗೆ 1 ಟಿಎಂಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾರಾಯಣಪುರ ಜಲಾಶಯದಿಂದ ಸೊನ್ನ ಬ್ಯಾರೇಜಿಗೆ 1 ಟಿಎಂಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಲಬುರಗಿ ಜಿಲ್ಲೆ ಭೀಕರ ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದು ಪ್ರಮುಖ ನದಿಯಾದ ಭೀಮಾ ನದಿಯಲ್ಲಿ ನೀರಿನ ಕೊರತೆಯಾಗಿದೆ. ಇದರಿಂದಾಗಿ ಜಿಲ್ಲೆಯ ಭೀಮಾ ತೀರದ ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆಎದುರಾಗಿತ್ತು. ಈ ಕುರಿತು ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಭೀಮಾ ನದಿಗೆ ನೀರುವ ಬಿಡುವ ಅವಶ್ಯಕತೆಗಳ ಕುರಿತಂತೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ. ಈ ನಡುವೆ ಶಾಸಕರಾದ ಎಂ.ವೈ.ಪಾಟೀಲ ಅವರೂ ಕೂಡಾ ಮಾನ್ಯ ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಭೀಮಾ ತೀರದ ಗ್ರಾಮಗಳಲ್ಲಿನ ಕುಡಿಯುವ ನೀರಿನ ಬವಣೆ ಹಾಗೂ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅವಶ್ಯಕತೆಯನ್ನು ಚರ್ಚಿಸಿದ್ದರು. ಪರಿಣಾಮವಾಗಿ, ಸರ್ಕಾರದ ನಿರ್ದೇಶನದಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ನಾರಾಯಣಪುರ ಜಲಾಶಯದಿಂದ ಸಂಬಂಧಿಸಿದ ಕಾಲುವೆಗಳ ಮೂಲಕ ಭೀಮಾ ನದಿಯ ಸೊನ್ನ ಬ್ಯಾರೇಜಿಗೆ 1 ಟಿಎಂಸಿ ನೀರು ಹರಿಸುವಂತೆ ಅದೇಶ ಹೊರಡಿಸಿದ್ದಾರೆ. ಸತತ ಪರಿಶ್ರಮ ಹಾಗೂ ಸ್ಥಳೀಯ ಶಾಸಕರ ಒತ್ತಾಸೆಯಿಂದಾಗಿ ಭೀಮಾ ನದಿಗೆ ನೀರು ಹರಿಸುವಂತೆ ಆದೇಶಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಜೊತೆಗೆ ಮಹಾರಾಷ್ಟ್ರ ದ ಉಜನಿ ಜಲಾಶಯದಿಂದಲೂ ಕೂಡಾ ಭೀಮಾ ನದಿಗೆ ನೀರು ಹರಿಸುವಂತೆ ಅಲ್ಲಿನ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ಪತ್ರಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಆದರೂ ಕೂಡಾ ಸರ್ಕಾರದ ಮಟ್ಟದಲ್ಲಿ ಇನ್ನೂ ಒತ್ತಡ ಹೇರಲಾಗುತ್ತಿದೆ ಎಂದು ಖರ್ಗೆ ಅವರ ತಿಳಿಸಿದ್ದಾರೆ.

ಈಗ ಭೀಮಾ ನದಿಗೆ ಬಿಟ್ಟಿರುವ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಸಚಿವರು, ಕೃಷಿ ಚಟುವಟಿಕೆಗಳು ನೀರು ಬಳಸದಂತೆ ಅವರು ಮತ್ತೊಮ್ಮೆ ರೈತಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share this article