ಧಾರವಾಡ: ಸಮಾಜದಲ್ಲಿ ದಿವ್ಯಾಂಗ ನೌಕರರು ಹಲವಾರು ಸಮಸ್ಯೆ ನಡುವೆ ಬದುಕುತ್ತಿದ್ದು, ನಮ್ಮ ಸರ್ಕಾರಗಳು ದಿವ್ಯಾಂಗ ನೌಕರರ ಬೇಡಿಕೆಗಳನ್ನು ಅನುಕಂಪದ ನೆಲೆಯಲ್ಲಿ ತ್ವರಿತವಾಗಿ ಈಡೇರಿಸಲು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕವಟಕೊಪ್ಪ ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಆರ್.ಆರ್.ತಳವಾರ ಮಾತನಾಡಿ, ಭಾರತ ಸರ್ಕಾರಿ ಯುಡಿಐಡಿ ಕಾರ್ಡ್‌ನ್ನು ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವಾಗಿ ಬಳಸಲು ಅಧಿಕೃತ ಆದೇಶ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರಿ ದಿವ್ಯಾಂಗ ನೌಕರರ ವರ್ಗಾವಣೆ, ಹೆಚ್ಚುವರಿ ಸಂದರ್ಭಗಳಲ್ಲಿ ಮತ್ತೆ ತ್ರಿಸದಸ್ಯ ಸಮಿತಿಯಿಂದ ಪ್ರಮಾಣಪತ್ರ ತರಬೇಕೆಂದು ಸೂಚಿಸುವದರಿಂದ ರಾಜ್ಯ ಸರ್ಕಾರದ ದಿವ್ಯಾಂಗ ನೌಕರರಿಗೆ ವೃಥಾ ಕಿರುಕುಳವಾಗುತ್ತಿದೆ. ಪ್ರತಿಯೊಂದೂ ಹಂತದಲ್ಲಿ ಯುಡಿಐಡಿ ಕಾರ್ಡ್‌ನ್ನು ಕಡ್ಡಾಯವಾಗಿ ಬಳಸಲು ಅನುಮತಿಸಲು ಒತ್ತಾಯಿಸಿದರು.
ನಕಲಿ ದಿವ್ಯಾಂಗ ನೌಕರರಿಂದ ನಿಜವಾದ ವಿಕಲಚೇತನರಿಗೆ ವ್ಯಾಪಕ ಅನ್ಯಾಯವಾಗುತ್ತಿದ್ದು, ಈ ಕುರಿತು ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಿ ನಿಜವಾದ ದಿವ್ಯಾಂಗ ನೌಕರರಿಗೆ ನ್ಯಾಯ ಒದಗಿಸಬೇಕು.ಜತೆಗೆ ಇತ್ತೀಚಿನ ದಿನಗಳಲ್ಲಿ ಮೇಲಾಧಿಕಾರಿಗಳಿಂದ ವಿಕಲಚೇತನ ನೌಕರರಿಗೆ ಕಿರುಕುಳ ಹೆಚ್ಚಾಗುತ್ತಿದ್ದು, ಇದನ್ನು ನಿವಾರಿಸಲು ಸದಸ್ಯರು ಹಕ್ಕೊತ್ತಾಯ ಮಾಡಿ ನಿರ್ಣಯ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಪಿ.ಕಡ್ಲಿಮಟ್ಟಿ ಅವರನ್ನು ಗೌರವಿಸಲಾಯಿತು.ರಮೇಶ ದೊತ್ರದ ಸ್ವಾಗತಿಸಿದರು. ಗೌರಮ್ಮ ಗೊಲ್ಲರ ವಂದಿಸಿದರು.