ಉದ್ಯೋಗ ಖಾತ್ರಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

KannadaprabhaNewsNetwork |  
Published : Apr 09, 2025, 12:31 AM IST
8ಎಚ್‌ವಿಆರ್‌3 | Kannada Prabha

ಸಾರಾಂಶ

ಕಾಯಕ ಬಂಧುಗಳನ್ನು ರಜಿಸ್ಟರ್ ಮೇಟ್‌ಗಳಾಗಿ ನರೇಗಾ ಕೆಲಸ ಮಾಡಲು ಅನುಕೂಲ ಕಲ್ಪಿಸಬೇಕು.

ಹಾವೇರಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಜಿಲ್ಲೆಯ ಕೂಲಿ ಕಾರ್ಮಿಕ ಬೇಡಿಕೆ ಈಡೇರಿಸುವಂತೆ ಮಹಾತ್ಮ ಗಾಂಧಿ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಬ್ಯಾಡಗಿ ತಾಲೂಕಿನ ಮಾಸಣಗಿ, ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ, ರಾಣಿಬೆನ್ನೂರು ತಾಲೂಕಿನ ಗುಡ್ಡದಹೊಸಳ್ಳಿ, ಸುಣಕಲ್ ಬಿದರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಅಡಿಯಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ನೀರು ಸಂರಕ್ಷಣೆ ಕಾಮಗಾರಿಗಳಾದ ಜಲಾನಯನ ಅಭಿವೃದ್ದಿ ಮಾಡಲು ಕ್ರಿಯಾ ಯೋಜನೆಗೆ ಜಿಪಂ ಸಿಇಒ ಮಂಜೂರಾತಿ ನೀಡಿದ್ದರು.

ಈ ಗ್ರಾಮಗಳಲ್ಲಿ ಸಂಪೂರ್ಣ ಕಾರ್ಮಿಕರೇ ಇದ್ದು, ಇಲ್ಲಿ ಬೇರೆ ಕೆಲಸಗಳು ಇರದ ಕಾರಣ ಈ ಕಾಮಗಾರಿಗಳನ್ನು ಮಾಡಲು ಮಾರ್ಗದರ್ಶನ ನೀಡಿದ್ದರು. ಆದರೆ ಮಾರ್ಚ್‌ ಒಳಗಡೆ ಈ ಕಾಮಗಾರಿಗಳ ಕೆಲಸ ಬಾಕಿ ಉಳಿದಿದ್ದು, ಏಪ್ರಿಲ್‌ನಲ್ಲಿ ಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಲು ಹೋದರೆ ಕೆಲಸ ನಿರಾಕರಣೆ ಮಾಡುತ್ತಿದ್ದಾರೆ. ಮತ್ತೆ ನವೀಕರಣ ಅನುಮೋದನೆ ನೀಡದ ಕಾರಣ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.

ಆದ್ದರಿಂದ ಕ್ರಿಯಾಯೋಜನೆಯ ಅನುಮೋದನೆ ಕುರಿತು ಸೂಕ್ತ ಆದೇಶ ನೀಡಬೇಕೆಂದು ಮನವಿ ಮಾಡಿದರು. ಕಾಯಕ ಬಂಧುಗಳನ್ನು ರಜಿಸ್ಟರ್ ಮೇಟ್‌ಗಳಾಗಿ ಮಾಡುವ ಮೂಲಕ ನರೆಗಾ ಕೆಲಸ ಮಾಡಲು ಅನುಕೂಲ ಮಾಡಿಸಬೇಕು. ಇದಕ್ಕೆ ಎಲ್ಲ ಪಂಚಾಯಿತಿಗಳಿಗೆ ಸುತ್ತೋಲೆ ಹಾಕಿಸಬೇಕು. ಕಾಯಕ ಬಂಧುಗಳಿಗೆ ನರೇಗಾ ಅಡಿಯಲ್ಲಿ ಮೇಟ್ಸ್‌ಗಳಿಗೆ ನೀಡುವ ಚಾರ್ಜ್‌ಅನ್ನು ಎಂಜಿನಿಯರ್‌ಗಳು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಮೇಟಿಗಳಿಗೆ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಸಮಯಕ್ಕೆ ಪಾವತಿ ಮಾಡುವಂತೆ ಕ್ರಮ ಜರುಗಿಸಬೇಕು.

ಕಳೆದೊಂದು ತಿಂಗಳಿಂದ ಕೆಲಸ ಮಾಡಿದ ಕಾರ್ಮಿರಿಗೆ ಹಣ ಬಟವಡೆ ಆಗಿಲ್ಲ. ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನರೆಗಾ ಅಡಿಯಲ್ಲಿ ಕಾರ್ಮಿಕರಿಗೆ ಆದ್ಯತೆ ಮೇಲೆ ಮಂಜೂರಾದ ಕ್ರಿಯಾಯೋಜನೆ ಪ್ರಕಾರ ಕೆಲಸ ನೀಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕಾರ್ಮಿಕ ಮುಖಂಡರು ಮನವಿ ಮಾಡಿದರು.

ಮನವಿ ಪತ್ರವನ್ನು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಪಂ ಸಿಇಒ ರುಚಿ ಬಿಂದಲ್‌ ಅವರಿಗೆ ಸಲ್ಲಿಸಲಾಯಿತು. ಬಿಎಜೆಎಸ್‌ಎಸ್ ಚೀಫ್ ಕೋ ಆರ್ಡಿನೇಟರ್ ಆಗಿ ಕುಬೇರಪ್ಪ ಆಯ್ಕೆ

ರಾಣಿಬೆನ್ನೂರು: ನವದೆಹಲಿಯ ಬಿಎಜೆಎಸ್‌ಎಸ್(ಭಾರತೀಯ ಆದಿಮ ಜಾತಿ ಸೇವಕ ಸಂಘ) ರಾಷ್ಟ್ರೀಯ ಕಾರ್ಯಕಾರಿಣಿಗೆ ಮುಖ್ಯ ಸಂಯೋಜಕರಾಗಿ ನಗರದ ಬಿಎಜೆಎಸ್‌ಎಸ್ ಕಾಲೇಜಿನ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಒಡಿಶಾದ ಕೋರಾಪಟ್ ನಗರದಲ್ಲಿ ಜರುಗಿದ ಬಿಎಜೆಎಸ್‌ಎಸ್ ರಾಷ್ಟ್ರೀಯ ಜನರಲ್ ಕೌನ್ಸಿಲ್‌ನ ವಾರ್ಷಿಕ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಎನ್.ಸಿ. ಹೆಂಬ್ರಾಮಜಿ ಅವರು ಕುಬೇರಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ