ಹಾವೇರಿ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿಯಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಇಲ್ಲದೇ ಇವು ಹೇಗೆ ನಡೆಯಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಒಂದಾದರೂ ಕಠಿಣ ಕ್ರಮ ಕೈಗೊಂಡು ನಿಮ್ಮ ಸಾಮರ್ಥ್ಯವನ್ನು ಸಾರ್ವಜನಿಕರಿಗೆ ತೋರಿಸಿ ಎಂದು ತಾಕೀತು ಮಾಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ರಮ ಮರಳುಗಾರಿಕೆ, ಸರ್ಕಾರಿ ಜಾಗದಲ್ಲಿ ಮಣ್ಣು ಲೂಟಿ, ಅಕ್ರಮ ಮದ್ಯ ಮಾರಾಟ, ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟ, ಮಟ್ಕಾ, ಜೂಟಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಹಾವೇರಿ ಮತ್ತು ರಾಣಿಬೆನ್ನೂರಿನಲ್ಲಿ ಅಕ್ರಮ ಮರಳುಗಾರಿಕೆ ಜೋರಾಗಿದೆ. ಅದರಲ್ಲಿ ಪೊಲೀಸರೇ ಶಾಮಿಲಾಗಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಎಸ್ಪಿಯವರಿಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕೇವಲ ದಂಡ ಹಾಕಿದರೆ ಸಾಲದು. ಅಕ್ರಮ ಮಾರಾಟ ಮಾಡುವವರ ಲೈಸೆನ್ಸ್ ರದ್ದು ಮಾಡಬೇಕು. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಅನ್ನಭಾಗ್ಯದ ಅಕ್ಕಿ ಕಳಸಂತೆಯಲ್ಲಿ ಮಾರಾಟವಾಗುತ್ತಿದೆ. ಮಟ್ಕಾ, ಜೂಟಾಟ ಎಗ್ಗಿಲ್ಲದೇ ನಡೆಯುತ್ತಿದೆ. ಈ ಕುರಿತು ಒಂದೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿರಿ. ಇಂತಹ ಪ್ರಕರಣಗಳನ್ನು ಗಮನಿಸಬೇಕು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದ ಕಾರಣ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಗ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪ್ರತಿಕ್ರಿಯಿಸಿ, ಅನಧಿಕೃತ ಮರಳುಗಾರಿಕೆ ತಡೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕಳೆದ ಡಿಸೆಂಬರ್ ಮಾರ್ಗಸೂಚಿ ಅನುಸಾರ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 55 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. 12 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಅನಿರೀಕ್ಷಿತ ದಾಳಿ ನಡೆಸಿ ಅನಧಿಕೃತ ಮರಳುಗಾರಿಗೆ ತಡೆಗೆ ಕ್ರಮವಹಿಸಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಪ್ರತಿಕ್ರಿಯಿಸಿ, ಜೂಜಾಟ ತಡೆಗೆ ನಿಗಾ ವಹಿಸಲಾಗುತ್ತದೆ. ಕಳೆದ ಮೂರು ತಿಂಗಳಲ್ಲಿ 143 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆಗಾರರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಅಂಥವರ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿರುವ ಅಕ್ಕಿ ಮಿಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಜಿಲ್ಲೆಯಲ್ಲಿ ಎಷ್ಟು ಅಕ್ಕಿ ಮಿಲ್‌ಗಳಿಗೆ ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ಪಶ್ನಿಸಿದರು.ಆಹಾರ ಇಲಾಖೆಯ ಡಿಡಿ ಪ್ರತಿಕ್ರಿಯಿಸಿ, ಅಕ್ರಮ ಅಕ್ಕಿ ಸಾಗಾಣಿಕೆ ಕುರಿತು 2021- 22ರಲ್ಲಿ 11, 22- 23ರಲ್ಲಿ 10, 23- 24ರಲ್ಲಿ 15 ಹಾಗೂ 24- 25ರಲ್ಲಿ 7 ಪ್ರಕರಣ ದಾಖಲಿಸಲಾಗಿದೆ. ಸಚಿನ್ ಡಂಬಳ ಎಂಬ ವ್ಯಕ್ತಿ ಮೇಲೆ 12 ಕೇಸ್‌ಗಳಿವೆ. ಕೋರ್ಟ್‌ನಲ್ಲಿ ವಜಾ ಆಗಿವೆ. ಜಿಲ್ಲೆಯಲ್ಲಿ 19ರಂದು ಅಕ್ಕಿ ಮಿಲ್ ಇವೆ. ಆಗಾಗ ಭೇಟಿ ನೀಡಲಾಗುತ್ತಿದೆ ಎಂದರು.ಆಗ ಸಚಿವರು, ಎಪಿಎಂಸಿ ಅಧಿಕಾರಿಗಳನ್ನು ಕರೆದು ಜಿಲ್ಲೆಯಲ್ಲಿ ಎಷ್ಟು ಅಕ್ಕಿ ಮಿಲ್ ಎಂದು ಪ್ರಶ್ನಿಸಿದಾಗ ಅವರು, 16 ಎಂದರು. ಹೆಸ್ಕಾಂನವರು 24 ಮಿಲ್‌ಗಳಿವೆ ಎಂದರು. ಆಗ ಈ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿ, ಈಗಲೇ ಹೋಗಿ ಮಾಹಿತಿ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳನ್ನು ಕಳುಹಿಸಿದರು. ಹಾವೇರಿ ನಗರದಲ್ಲಿ ಹೊಸ ಬಡಾವಣೆಗೆ ಅನುಮತಿ ನೀಡುವಾಗ ನಿಯಮಾನುಸಾರ ಮುಖ್ಯ ರಸ್ತೆಬದಿಯಲ್ಲಿ ರಸ್ತೆ ಬರಬೇಕು. ಆದರೆ, ರಸ್ತೆ ಬದಿಯಲ್ಲಿ ಕಮರ್ಷಿಯಲ್‌ಗೆ ನಕ್ಷೆ ತಯಾರಿಸಲಾಗಿದೆ. ಹೇಗೆ ಅನುಮತಿ ನೀಡಲಾಗಿದೆ. ನಿಯಮಾನುಸಾರ ನಕ್ಷೆ ತಯಾರಿಸದ ಬಡಾವಣೆಗಳ ಅನುಮತಿ ರದ್ದು ಮಾಡಬೇಕು ಎಂದು ಹುಡಾ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ವೈದ್ಯಕೀಯ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಚಿವರು ನಡೆಸಿದರು.ಸಭೆಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.