ಭೋವಿ ಅಭಿವೃದ್ಧಿ ನಿಗಮಕ್ಕೆ 2 ಸಾವಿರ ಕೋಟಿ ಅನುದಾನಕ್ಕೆ ಆಗ್ರಹ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಭೋವಿ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಿಸಬೇಕು ಹಾಗೂ ವಿಧಾನಸೌಧದ ಮುಂಭಾಗದಲ್ಲಿ ಸಿದ್ಧರಾಮೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಕಲ್ಲು ಬಂಡೆ ಮತ್ತು ಕಟ್ಟಡ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಭೋವಿ ಅಭಿವೃದ್ಧಿ ನಿಗಮಕ್ಕೆ ಎರಡು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕಲ್ಲು ಬಂಡೆ ಕಸಬು ನಡೆಸುವವರ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಿಸಬೇಕು ಹಾಗೂ ವಿಧಾನಸೌಧದ ಮುಂಭಾಗದಲ್ಲಿ ಸಿದ್ಧರಾಮೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಕಲ್ಲು ಬಂಡೆ ಮತ್ತು ಕಟ್ಟಡ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್ ಆಗ್ರಹಿಸಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಸಭೆ ಮತ್ತು ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.

ಭೋವಿ ವಡ್ಡರ ಜಾತಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು. ನಿತ್ಯ ಕೂಲಿ ಕೆಲಸ ಮಾಡಿ ಬದುಕುವ ಭೋವಿ ವಡ್ಡರ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಮನಗುಂಡಿಯ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು, ದಿಲ್ಲಿಯಲ್ಲಿ ಇರುವಂತಹ ಸಂಸತ್ತ ಭವನ, ವಿಧಾನಸೌಧ, ವಿಶ್ವವಿದ್ಯಾಲಯಗಳು, ಮಠಗಳು, ದೇವಸ್ಥಾನಗಳು ಭೋವಿ ಸಮಾಜದ ವಿಶ್ವಬ್ರಹ್ಮವಾಗಿವೆ. ಅವುಗಳನ್ನು ನಿರ್ಮಾಣ ಮಾಡಿರುವ ಭೋವಿ ವಡ್ಡರ ಸಮಾಜಕ್ಕೆ ಸೂಕ್ತ ನ್ಯಾಯ ದೊರಕಬೇಕು ಎಂದರು.

ಮಹಿಳಾ ರಾಜ್ಯಾಧ್ಯಕ್ಷರಾದ ಸುಶೀಲಾ ಕೆ.ಎಂ. ಮಾತನಾಡಿ, ಭೋವಿ ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಪಡೆಯಲು ಸಮಾಜ ಬಾಂಧವರು ಮುಂದೆ ಬರಬೇಕು. ಭೋವಿ ವಡ್ಡರ ನಿಗಮದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಭೋವಿ ಅಭಿವೃದ್ಧಿ ನಿಗಮ ಮಂಡಳಿಗೆ ಕಳಂಕರಹಿತ ಅಧ್ಯಕ್ಷರನ್ನು ನೇಮಕ ಮಾಡಬೇಕು. ಫಲಾನುಭವಿಗಳಿಗೆ ಸರಕಾರದಿಂದ ಸಿಗುವಂತಹ ಯೋಜನೆಗಳನ್ನು ತಲುಪಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಭೋವಿ ಸಮಾಜದ ಮುಖಂಡ ಬಸವರಾಜ ಆನೆಗುಂದಿ ಮಾತನಾಡಿ, ಶತಶತಮಾನಗಳಿಂದ ಶೋಷಣೆಗೊಳಗಾದ ನಮ್ಮ ಸಮಾಜ 12ನೇ ಶತಮಾನದಲ್ಲಿ ಸಿದ್ಧರಾಮೇಶ್ವರರು ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರೂ 21ನೇ ಶತಮಾನದಲ್ಲಿಯೂ ನಾವು ಸಾಮಾಜಿಕ, ಆರ್ಥಿಕ, ಶಿಕ್ಷಣ ಹಾಗೂ ಉದ್ಯೋಗಗಳಿಂದ ವಂಚಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಧಾರವಾಡದ ಮಂಜನಾಥ ತಿಮ್ಮಣ್ಣ ಹಿರೇಮನಿ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ರಾಜಶೇಖರ ದುಮ್ಮವಾಡ ಸ್ವಾಗತಿಸಿದರು. ರವಿ ಹೆಗಡೆ ನಿರೂಪಿಸಿದರು. ಜಿಲ್ಲಾಧ್ಯಕ್ಷ ಹರೀಶ ವಡ್ಡರ ಇದ್ದರು.

Share this article