ಆಶಾಗಳ ಪ್ರೋತ್ಸಾಹಧನ ಬಾಕಿ ಕೂಡಲೇ ಬಿಡುಗಡೆ ಮಾಡಲು ಆಗ್ರಹ

KannadaprabhaNewsNetwork |  
Published : Jun 12, 2026, 02:15 AM IST
ಗದಗ ಜಿಲ್ಲಾಡಳಿತ ಮುಂಭಾಗದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಹಾಗೂ ಪ್ರೋತ್ಸಾಹಧನ ನಿಯಮಿತವಾಗಿ ದೊರೆಯುತ್ತಿಲ್ಲ. ಕೆಲವು ತಿಂಗಳ ಕೇಂದ್ರ ಪ್ರೋತ್ಸಾಹಧನ ಹಾಗೂ ಗೌರವಧನ ಇನ್ನೂ ಬಾಕಿ ಉಳಿದಿದ್ದು, ವಿವಿಧ ಯೋಜನೆಗಳಡಿ ನೀಡಬೇಕಾದ ಹಣವೂ ಹಲವು ವರ್ಷಗಳಿಂದ ಬಿಡುಗಡೆಯಾಗಿಲ್ಲ.

ಗದಗ: ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಬಾಕಿ ಇರುವ ಗೌರವಧನ ಮತ್ತು ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಹಾಗೂ ಪ್ರೋತ್ಸಾಹಧನ ನಿಯಮಿತವಾಗಿ ದೊರೆಯುತ್ತಿಲ್ಲ. ಕೆಲವು ತಿಂಗಳ ಕೇಂದ್ರ ಪ್ರೋತ್ಸಾಹಧನ ಹಾಗೂ ಗೌರವಧನ ಇನ್ನೂ ಬಾಕಿ ಉಳಿದಿದ್ದು, ವಿವಿಧ ಯೋಜನೆಗಳಡಿ ನೀಡಬೇಕಾದ ಹಣವೂ ಹಲವು ವರ್ಷಗಳಿಂದ ಬಿಡುಗಡೆಯಾಗಿಲ್ಲ.

ಇದಲ್ಲದೆ, ಆರೋಗ್ಯ ಇಲಾಖೆಯ ಆದೇಶದಂತೆ ಆಶಾ ನಿಧಿ ತಂತ್ರಾಂಶದಿಂದ ಒಂಬತ್ತು ವಿವಿಧ ಸೇವೆಗಳನ್ನು ಕೈಬಿಡಲಾಗಿದ್ದು, ಇದರಿಂದ ಪ್ರತಿ ಆಶಾ ಕಾರ್ಯಕರ್ತೆಗೆ ತಿಂಗಳಿಗೆ ₹500ರಿಂದ ₹1 ಸಾವಿರದ ವರೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಸೇವೆಗಳು ತಾಯಿ-ಮಗು ಆರೋಗ್ಯ ಸೇರಿದಂತೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಮಹತ್ವದ ಕಾರ್ಯಗಳಾಗಿರುವುದರಿಂದ ಅವುಗಳನ್ನು ಪುನಃ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮನವಿಯಲ್ಲಿ ಪ್ರಮುಖವಾಗಿ ಬಾಕಿ ಇರುವ 4-5 ತಿಂಗಳ ಕೇಂದ್ರ ಪ್ರೋತ್ಸಾಹಧನ ಹಾಗೂ 1-2 ತಿಂಗಳ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡುವುದು, ಸ್ಥಗಿತಗೊಳಿಸಿರುವ ಸೇವೆಗಳನ್ನು ಪುನರಾರಂಭಿಸುವುದು, ಟಿಬಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಪ್ರೋತ್ಸಾಹಧನವನ್ನು ಪಾವತಿಸುವುದು, ಬಾಕಿ ಇರುವ ಎಲ್ಲ ಹಣವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.

ಆಶಾ ಕಾರ್ಯಕರ್ತೆಯರಿಂದ ಮೊಬೈಲ್ ಆ್ಯಪ್ ಮೂಲಕ ಕಡ್ಡಾಯ ದಾಖಲಾತಿ ಮಾಡುವ ಒತ್ತಡವನ್ನು ಕೈಬಿಡಬೇಕು, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ನೆರವು ನೀಡಬೇಕು, ಆಶಾ ಸುಗಮಕಾರರನ್ನು ವೇತನದೊಂದಿಗೆ ಮುಂದುವರಿಸಬೇಕು ಹಾಗೂ ಮುಖ್ಯಮಂತ್ರಿ ಘೋಷಿಸಿರುವಂತೆ ಮಾಸಿಕ ₹10 ಸಾವಿರ ಗೌರವಧನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ವಿವಿಧ ತಾಲೂಕು ಮತ್ತು ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಕಾರ್ಯಕರ್ತೆಯರು, ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜ ಸೇವೆ ಮಾನವೀಯತೆ ಮತ್ತು ರಾಷ್ಟ್ರೀಯತೆ ಗುಣಗಳ ಮೈಗೂಡಿಸಿಕೊಳ್ಳಿ
ರಸ್ತೆ ಇಲ್ಲದೆ ಪರದಾಟ: ಕದರಮಂಡಲಗಿ ಗ್ರಾಮಸ್ಥರ ಪ್ರತಿಭಟನೆ