ಗದಗ: 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲತಾಂಶ ಬಂದಿರುವ ಅನುದಾನಿತ ಪ್ರೌಢಶಾಲೆಗಳ ಮೇಲಿನ ಕ್ರಮದ ಆದೇಶವನ್ನು ತತ್‌ಕ್ಷಣದಿಂದ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಸರ್ಕಾರವು ಶಿಕ್ಷಣ ಇಲಾಖೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೇರೆ ಬೇರೆ ಆದೇಶಗಳನ್ನು ಹೊರಡಿಸುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವ ಹಂತವನ್ನು ತಲುಪಿವೆ. ಹಿಂದಿನ ಇತಿಹಾಸವನ್ನು ಮೆಲುಕು ಹಾಕಿದಾಗ ಸರ್ಕಾರ ಮಾಡಲಾರದ ಶೈಕ್ಷಣಿಕ ಕ್ರಾಂತಿಯನ್ನು ಮಾಡಿ ಸರ್ವರಿಗೆ ಶಿಕ್ಷಣ ತಲುಪಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸಿ ಸಮಾಜಕ್ಕೆ ಹಲವಾರು ಮಹನೀಯರನ್ನು ಕೊಡಮಾಡಿದ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಹೀನಾಯ ಸ್ಥಿತಿಗೆ ತಲುಪಿ ಸರ್ಕಾರದ ದ್ವಿನೀತಿ ಧೋರಣೆಯಿಂದ ಮುಚ್ಚುವ ಹಂತವನ್ನು ತಲುಪಿವೆ. ಅದಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣದಲ್ಲಿ ಸಮಾನತೆಯನ್ನು ಕಾಯ್ದುಕೊಂಡು ಖಾಸಗಿ ಶಿಕ್ಷಣಗಳಿಗೆ ಶಿಕ್ಷಣ ಇಲಾಖೆ ಮಾಡಿರುವ ಈ ಆದೇಶವನ್ನು ತಕ್ಷಣದಿಂದ ಹಿಂಪಡೆದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಕೊಡುವುದರೊಂದಿಗೆ ಶಿಕ್ಷಣದಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಲು ತಾವು ಇಂತಹ ಆದೇಶಗಳನ್ನು ಆಗದಂತ ಶಿಕ್ಷಣ ಇಲಾಖೆಗೆ ಸೂಚನೆ ನೀಡಿ ಈ ಆದೇಶವನ್ನು ತಕ್ಷಣದಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಸವಲೂರ, ವೆಂಕಣ್ಣ ರೆಡ್ಡೇರ, ಶ್ರೀನಿವಾಸ ಹುಯಿಲಗೋಳ, ಸಂಕೇತ ದಂಡಿನ, ಅಲ್ಕೋಡ ಹನಮಂತಪ್ಪ, ಎ.ಎಸ್. ಪಾಟೀಲ, ಬಿ.ಸಿ.ಗುಳೇದ, ಬೂದಪ್ಪ ಅಂಗಡಿ, ಭೀಮಪ್ಪ ಯರಗುಪ್ಪ, ಎಲ್.ಎಸ್. ಅರಳಿಹಳ್ಳಿ, ಝಡ್.ಎಂ.ಖಾಜಿ, ಜಿ.ಆರ್.ಗೊಂಡಬಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.