ರೈತ ವಿರೋಧಿ ಕಾಯ್ದೆ ಕೂಡಲೇ ಕೈಬಿಡಲು ಒತ್ತಾಯ

KannadaprabhaNewsNetwork |  
Published : Mar 06, 2025, 12:32 AM IST
4ಎಚ್‌ಪಿಟಿ1- ಹೊಸಪೇಟೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನವ ಕರ್ನಾಟಕ ನಿರ್ಮಾಣ ಆಂದೋಲನ (ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ನವ ಕರ್ನಾಟಕ ನಿರ್ಮಾಣ ಆಂದೋಲನ (ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ) ಕಾರ್ಯಕ್ರಮವನ್ನು ನಗರದ ಪಂಪಕಲಾ ಮಂದಿರದಲ್ಲಿ ಮಾ.7ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳುವ ಬಗ್ಗೆ ಸಭೆ ಕರೆಯಲಾಯಿತು.

ನಾಳೆ ನವ ಕರ್ನಾಟಕ ನಿರ್ಮಾಣ ಆಂದೋಲನ । ಪಂಪಕಲಾ ಮಂದಿರದಲ್ಲಿ ಸಭೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ನವ ಕರ್ನಾಟಕ ನಿರ್ಮಾಣ ಆಂದೋಲನ (ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ) ಕಾರ್ಯಕ್ರಮವನ್ನು ನಗರದ ಪಂಪಕಲಾ ಮಂದಿರದಲ್ಲಿ ಮಾ.7ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳುವ ಬಗ್ಗೆ ಸಭೆ ಕರೆಯಲಾಯಿತು.

ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆ ಇವುಗಳು ರೈತರಿಗೆ ಮಾರಕವಾದ ಕಾಯ್ದೆಗಳನ್ನು 2020ರಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಯಿತು. ಇದರಿಂದ ಸುಮಾರು 10 ಲಕ್ಷ ರೈತರು ಭೂಮಿಯನ್ನು ಕಳೆದುಕೊಂಡು ಬೀದಿಪಾಲು ಆಗಿದ್ದಾರೆ. ಈಗ 2023ರ ಚುನಾವಣೆಯ ಮುನ್ನ ಸಿದ್ದರಾಮಯ್ಯ ಅವರು ಹೇಳಿದ ಹಾಗೆ ಕಾಂಗ್ರೆಸ್ ಸರ್ಕಾರ ಬಂದ 24 ತಾಸಿನೊಳಗೆ ಈ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂಸ್ವಾಧೀನ ಕಾಯ್ದೆಯನ್ನು ತೆಗೆದು ಹಾಕುತ್ತೇವೆ ಎಂದು ಮಾತುಕೊಟ್ಟಿದ್ದರು. ಆದರೆ ಸುಮಾರು 2.5 ವರ್ಷ ಆದರೂ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲದಂತೆ ಆ ಕಾನೂನುಗಳನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಬಂದಿರುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ. ಈ ಕೂಡಲೇ ಈ ಮೂರು ಕಾಯ್ದೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಜಡಿಯಪ್ಪ ಮಾತನಾಡಿ, ವಿಜಯನಗರ ಕ್ಷೇತ್ರದ ಹಳ್ಳಿ ಭಾಗದಲ್ಲಿ ಕೆರೆ ತುಂಬಿಸುವ ಯೋಜನೆ ಕಳೆದ ಎರಡ್ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಯಾವುದೇ ರೀತಿಯ ಕಾಮಗಾರಿಯನ್ನು ಮಾಡಿರುವುದಿಲ್ಲ. ಆದರೆ ಈಗ ಸರ್ಕಾರದಲ್ಲಿ ಯಾವುದೇ ಅನುದಾನ ಇಲ್ಲ ಎಂದು ಹೇಳಿ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಮಾತನಾಡಿ, ಸಕ್ಕರೆ ಕಾರ್ಖಾನೆ ಮುಚ್ಚಿ ಸುಮಾರು ಎಂಟು ವರ್ಷಗಳು ಆಗಿದ್ದು, ಇಲ್ಲಿಯವರೆಗೂ ಯಾವುದೇ ಸರ್ಕಾರ ಆಗಲಿ, ಉಸ್ತುವಾರಿ ಮಂತ್ರಿಗಳಾಗಲಿ, ಶಾಸಕರಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಇದರ ಬಗ್ಗೆ ಹಲವಾರು ಬಾರಿ ಮನವಿ ಕೊಟ್ಟರೂ ಯಾವುದೇ ರೀತಿಯಾಗಿ ಕಾರ್ಖಾನೆಯನ್ನು ಪುನರ್ ಆರಂಭ ಮಾಡಲು ಆಗಿರುವುದಿಲ್ಲ. ಇದು ಸಹ ಸರ್ಕಾರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಇಲ್ಲಿನ ರೈತರಿಗೆ ಪ್ರತಿಯೊಂದು ಟನ್ ಕಬ್ಬಿಗೆ ಒಂದು ಸಾವಿರದಿಂದ ₹1200 ವರೆಗೆ ನಷ್ಟ ಆಗಿರುತ್ತದೆ. ರಾಜ್ಯ ಸರ್ಕಾರ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಆರ್.ಆರ್. ತಾಯಪ್ಪ, ರೇವಣಸಿದ್ದಪ್ಪ, ಕೆ.ಮೂರ್ತಿ ರಾಮಾಂಜಿನಿ, ಜೆ.ರಾಘವೇಂದ್ರ, ಕೆ.ಸುರೇಶ್, ಎಂ.ಜಹಿರುದ್ದೀನ್ ಜಾಕೀರ್ ಹುಸೇನ್, ಅಯ್ಯಣ್ಣ, ಧರ್ಮಸಾಗರ ಮಲ್ಲಿಕಾರ್ಜುನ, ಸತೀಶ, ಹನುಮಂತರೆಡ್ಡಿ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ