ನೀರು, ನೈರ್ಮಲ್ಯ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ

KannadaprabhaNewsNetwork | Published : Mar 6, 2025 12:32 AM

ಸಾರಾಂಶ

Women's role in water and sanitation management is important

- ನೀರು, ನೈರ್ಮಲ್ಯ ಮತ್ತು ಶುಚಿತ್ವ ಅಂಶಗಳ ಕುರಿತು ಜನ ಜಾಗೃತಿ ಕಾರ್ಯಕ್ರಮ: ಲವೀಶ್ ಮಾಹಿತಿ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾರ್ಚ್‌ 8ರಂದು ವಿಶ್ವ ಮಹಿಳೆಯರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಅಂಶಗಳಲ್ಲಿ ಮಹಿಳೆಯರ ಪಾತ್ರ ಹಾಗೂ ಪ್ರಾಮುಖ್ಯತೆ ಅರಿತು, ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಲು ಜನ ಜಾಗೃತಿ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ತಿಳಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಗ್ರಾಮೀಣ ಪ್ರದೇಶದ ಜನರಲ್ಲಿ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಅಂಶಗಳ ಕುರಿತು ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲ ಚಟುವಟಿಕೆಗಳಲ್ಲಿ ಚುನಾಯಿತ ಪ್ರತಿನಿಧಿ, ಸಾರ್ವಜನಿಕರು, ಮಹಿಳೆಯರು, ಕಿಶೋರಿಯರು, ಮಕ್ಕಳು, ಸ್ವ ಸಹಾಯ ಸಂಘದ ಮಹಿಳೆಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಮಹಿಳಾ ಗ್ರಾಮ ಸಭೆ: ಮಹಿಳಾ ಗ್ರಾಮ ಸಭೆ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಭಾಗವಹಿಸುವಿಕೆ ಎಲ್ಲಾ ರಂಗದಲ್ಲಿ ಮುಂದೆ ಬರುವಂತೆ ಪ್ರೋತ್ಸಾಹಿಸಿ ಮಹಿಳಾ ಸಬಲೀಕರಣಕ್ಕೆ ಇರುವ ಯೋಜನೆ, ಕಾರ್ಯಕ್ರಮಗಳ ಮಾಹಿತಿ ನೀಡುವುದು.

ಸ್ವಚ್ಚತಾ ಓಟ: ಸ್ವಚ್ಚತೆಯ ಕುರಿತು ಉತ್ತಮ ಅಭ್ಯಾಸ ರೂಡಿಸಿಕೊಳ್ಳಲು ಜಾಗೃತಿ ಮೂಡಿಸಲು ಸ್ವಚ್ಚತೆಯ ಓಟ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.

ಸ್ವಚ್ಚ ಅಂಗಳ-ಶುಚಿತ್ವದ ರಂಗೋಲಿ: ಮನೆಯ ಮುಂದಿನ ಅಂಗಳ ಸ್ವಚ್ಚತೆಯಿಂದ ಕೂಡಿರುವ ಮನೆ ಗುರಿತಿಸಿ ರಂಗೋಲಿ ಬಿಡಿಸಿ ಇತರರು ಸ್ವಚ್ಛತೆಯಿಂದ ಇರುವಂತೆ ಜಾಗೃತಿಯ ಮಾಹಿತಿ ನೀಡುವುದು ಸ್ವಚ್ಚ ಅಂಗಳ- ಶುಚಿತ್ವದ ರಂಗೋಲಿ ಕಾರ್ಯಕ್ರಮವಾಗಿದೆ.

ಗುಂಪು ಸಂವಾದ: ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ಮಹಿಳೆಯರ ಪಾತ್ರ ಹಾಗೂ ಮಹಿಳೆಯರ ಸಬಲೀಕರಣ ಬಗ್ಗೆ ಸಂವಾದ ನೆಡೆಸುವುದು, ನೀರಿನ ಮಿತ ಬಳಕೆ, ಮರುಬಳಕೆ, ತ್ಯಾಜ್ಯ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಚರ್ಚಿಸಲು ಸಾಧನೆ ಮಾಡಿರುವ ವ್ಯಕ್ತಿಯೊಂದಿಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

ವಾಶ್ ಚಟುವಟಿಕೆ: ವೈಯಕ್ತಿಕ ಸ್ವಚ್ಚತೆ ರೂಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವುದು, ಮಹಿಳೆಯರು ಋತುಚಕ್ರ ಅವಧಿಯಲ್ಲಿ ಬಳಕೆ ಮಾಡಿರುವ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ಮನೆಯ ಸುತ್ತ ನೀರು ನಿಲ್ಲದಂತೆ ಸ್ವಚ್ಚ ವಾಗಿಟ್ಟುಕೊಂಡು ಸ್ವಚ್ಚ ಗ್ರಾಮದಿಂದ ಮಾದರಿ ಗ್ರಾಮ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.

ಸನ್ಮಾನ: ಈ ಎಲ್ಲಾ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಮಾಡಿರುವ, ಕಾರ್ಯಕ್ರಮ-ಚಟುವಟಿಕೆ ಆಯೋಜನೆ, ಭಾಗವಹಸಿರುವ ಉತ್ತಮ ಯಶೋಗಾಥೆ ಹೊಂದಿರುವ ಮಹಿಳೆಯರನ್ನು ಗುರಿತಿಸಿ ಜಿಲ್ಲಾ ಮಟ್ಟದಲ್ಲಿ ಸನ್ಮಾನಿಸಲಾಗುವುದು. ಕಾರ್ಯಕ್ರಮ/ ಚಟುವಟಿಕೆ ಆಯೋಜಿಸಿ ಅದರಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

-

5ವೈಡಿಆರ್‌13 : ಲವೀಶ ಒರಡಿಯಾ, ಸಿಇಒ, ಜಿಲ್ಲಾ ಪಂಚಾಯಿತಿ, ಯಾದಗಿರಿ.

Share this article