ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಂಡ್ಯ ವಿಶ್ವ ವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನ ಮಾಡಿದರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವೇ ಜಾಸ್ತಿ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ತಾಲೂಕಿನ ಮಹದೇವಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ವಿಶ್ವವಿದ್ಯಾಲಯ ಎಂದರೆ ಎಲ್ಲೂ ಬೆಲೆ ಇಲ್ಲ. ಮೈಸೂರು ವಿಶ್ವವಿದ್ಯಾಲಯ ಎಂದರೆ ದೇಶ- ವಿದೇಶ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಇದೆ ಎಂದರು.
ಮೈಸೂರು ನಮ್ಮ ಅವಿಭಾಜ್ಯ ಅಂಗ. ಮೈಸೂರು ವಿಶ್ವವಿದ್ಯಾಲಯದ ಜೊತೆಗೆ ನಾವು ಗುರುತಿಸಿಕೊಂಡರೆ ತಪ್ಪೇನು. ಇಂದು ಮೈಸೂರು ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಸೇರಿದಂತೆ ಇತರೆ ವಿಶ್ವವಿದ್ಯಾಲಯಗಳೊಂದಿಗೆ ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಹೇಗೆ ಪೈಪೋಟಿ ನೀಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ಅಲಂಕರಿಸುವುದು ಬೇಡವೇ?
ಮಂಡ್ಯ ವಿವಿಯನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡುವುದು ಅನಿವಾರ್ಯ ಎಂಬ ಸರ್ಕಾರದ ತೀರ್ಮಾನಕ್ಕೆ ತಮ್ಮ ಬೆಂಬಲ ಇರುವುದಾಗಿ ಸ್ಪಷ್ಟಪಡಿಸಿದರು.ವಿ.ಪಕ್ಷದವರು ವಿನಾಕಾರಣ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೇ. ಇಂದು ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕುಗಳಲ್ಲಿ ಸುಮಾರು 11 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದೇನೆ ಎಂದರು.
ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳೂ ಜಾರಿಗೊಂಡಿವೆ. ಸದನದಲ್ಲೂ ಈ ಬಗ್ಗೆ ಚರ್ಚೆಗಳು ನಡೆದಿವೆ. ಕೆ.ಆರ್.ಎಸ್ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ನಿರ್ವಹಣಾ ಜವಾಬ್ದಾರಿಯನ್ನು 30 ವರ್ಷಕ್ಕೆ ನಿಗದಿ ಪಡಿಸಲಾಗಿತ್ತು. ಇದೀಗ 45 ವರ್ಷಕ್ಕೆ ವಿಸ್ತರಿಸಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಭೂಮಿಪೂಜೆ ವೇಳೆ ಚುನಾಯಿತ ಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
---------ನಾನು ಒಕ್ಕಲಿಗ ನನಗೂ ಸಿಎಂ ಆಗೋ ಆಸೆ ಇದೆ: ರಮೇಶ್ ಬಂಡಿಸಿದ್ದೇಗೌಡ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಂ.ಬಿ.ಪಾಟೀಲ್ ಎಲ್ಲರೂ ಸಿಎಂ ಆಗಲಿ. ಅವರವರ ಸಮುದಾಯಕ್ಕೆ ಅರ್ಹರು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನುಡಿದರು. ಸುದ್ಧಿಗಾರರೊಂದಿಗೆ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಕುರಿತು ಉತ್ತರಿಸಿದ ಶಾಸಕರು, ನಾನೂ ಕೂಡ ಒಕ್ಕಲಿಗನೇ. ಯಾರಿಗೆ ತಾನೇ ಸಿಎಂ ಆಗಲು ಆಸೆ ಇಲ್ಲ. ನನಗೂ ಆಸೆ ಇದೆ. ಕಾಂಗ್ರೆಸ್ ಪಕ್ಷ ಏನು ನಿರ್ಧಾರ ಕೈಗೊಳ್ಳಲಿದೆಯೋ ಅದಕ್ಕೆ ನಾನು ಬದ್ಧ ಎಂದು ಹೇಳಿದರು.