ಗಾಲ್ಫ್‌ ಕ್ಲಬ್‌ನಿಂದ ರೇಸ್‌ ಕ್ಲಬ್‌ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ಆರೋಪ

KannadaprabhaNewsNetwork |  
Published : Mar 06, 2025, 12:32 AM IST
33 | Kannada Prabha

ಸಾರಾಂಶ

ಮೈಸೂರು ರೇಸ್‌ ಕ್ಲಬ್‌ ಗೆ ಸೇರಿದ 139.39 ಎಕರೆ ಪ್ರದೇಶದಲ್ಲಿ ಕೆಲವೊಂದಷ್ಟು ಜಾಗವನ್ನು ಗಾಲ್ಫ್‌ ಕ್ಲಬ್‌ ನಿರ್ವಹಿಸಲು 1985 ರಲ್ಲಿ ನೀಡಲಾಗಿತ್ತು. ಆದರೆ ಇಡೀ ಜಾಗವು ಈಗಲೂ ರೇಸ್‌ ಕ್ಲಬ್‌ ಅಡಿಯಲ್ಲಿಯೇ ಇದೆ. ಕಳೆದ ವರ್ಷ ಕ್ರಾಸ್‌ ಕಂಟ್ರಿ ಗಾಲ್ಫ್‌ ಚಾಂಪಿಯನ್‌ಶಿಪ್‌‌ ನಡೆಸುವ ವೇಳೆ ಮಹಿಳೆಯರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ರೇಸ್‌ ಕ್ಲಬ್‌ ಮೌಖಿಕ ಒಪ್ಪಿಗೆ ನೀಡಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ರೇಸ್‌ ಕ್ಲಬ್‌ಗೆ ಸೇರಿದ ಜಾಗದಲ್ಲಿ ಗಾಲ್ಫ್‌ ಕ್ಲಬ್‌ ನಿಂದ ಶೌಚಾಲಯ ಮತ್ತು ಅಡುಗೆ ಮನೆ ಸೇರಿದಂತೆ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿದ್ದರೂ, ನಗರ ಪಾಲಿಕೆ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೇಸ್‌ ಕ್ಲಬ್‌ ಅಧ್ಯಕ್ಷ ಜಿ.ವೆಂಕಟೇಶ್‌ ಆರೋಪಿಸಿದರು.

ಮೈಸೂರು ರೇಸ್‌ ಕ್ಲಬ್‌ ಗೆ ಸೇರಿದ 139.39 ಎಕರೆ ಪ್ರದೇಶದಲ್ಲಿ ಕೆಲವೊಂದಷ್ಟು ಜಾಗವನ್ನು ಗಾಲ್ಫ್‌ ಕ್ಲಬ್‌ ನಿರ್ವಹಿಸಲು 1985 ರಲ್ಲಿ ನೀಡಲಾಗಿತ್ತು. ಆದರೆ ಇಡೀ ಜಾಗವು ಈಗಲೂ ರೇಸ್‌ ಕ್ಲಬ್‌ ಅಡಿಯಲ್ಲಿಯೇ ಇದೆ. ಕಳೆದ ವರ್ಷ ಕ್ರಾಸ್‌ ಕಂಟ್ರಿ ಗಾಲ್ಫ್‌ ಚಾಂಪಿಯನ್‌ಶಿಪ್‌‌ ನಡೆಸುವ ವೇಳೆ ಮಹಿಳೆಯರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ರೇಸ್‌ ಕ್ಲಬ್‌ ಮೌಖಿಕ ಒಪ್ಪಿಗೆ ನೀಡಿತ್ತು.

ಆದರೆ, ಇದನ್ನು ಬಂಡವಾಳ ಮಾಡಿಕೊಂಡು ಶೌಚಾಲಯ ಮತ್ತು ಅದರ ಮೇಲೆ ಅಡುಗೆ ಮನೆ ಮತ್ತಿತರ ಕಟ್ಟಡವನ್ನು ಹಂತ ಹಂತವಾಗಿ ನಿರ್ಮಿಸುತ್ತಿದ್ದಾರೆ. ನಾವು ಅನುಮತಿ ನೀಡಿದ್ದು ಶೌಚಾಲಯ ನಿರ್ಮಾಣಕ್ಕೆ ಮಾತ್ರ. ಈಗ ಶೌಚಾಲಯ ನಿರ್ಮಿಸಿರುವ ಜಾಗದಲ್ಲಿಯೇ ಕುದುರೆಗಳು ರೇಸ್‌ ವೇಳೆ ವೇಗವನ್ನು ಹೆಚ್ಚು ಪಡೆಯುತ್ತವೆ. ಅಲ್ಲಿ ದೊಡ್ಡ ಕಟ್ಟಡ ನಿರ್ಮಿಸುವುದರಿಂದ ಕುದುರೆಗಳು ತಿರುಗಲು ಮತ್ತು ವೇಗ ಪಡೆಯಲು ಅಡಚರಣೆ ಆಗುತ್ತದೆ ಎಂದರು.

ಈ ಸಂಬಂಧ ನಾವು ನಗರ ಪಾಲಿಕೆಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟಕ್ಕೂ ಗಾಲ್ಫ್‌ ಕ್ಲಬ್‌ ನಗರ ಪಾಲಿಕೆಯಿಂದ ಕಟ್ಟಡ ನಿರ್ಮಿಸಲು ಅನುಮತಿ ಪಡೆದಿಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆಗೆಯಿಂದ ಅನುಮತಿ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕಿರುವುದು ಸ್ಥಳೀಯ ಸಂಸ್ಥೆ ಅಲ್ಲವೇ? ಈ ವಿಷಯವನ್ನು ನಗರ ಪಾಲಿಕೆಗೆ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಹೀಗೆಯೇ ಮುಂದುವರಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೇವಲ ಶೌಚಾಲಯ ನಿರ್ಮಿಸಿಕೊಳ್ಳಲು ನಮ್ಮದೇನು ತಕರಾರು ಇಲ್ಲ. ಅದನ್ನು ಹೊರತುಪಡಿಸಿ ಬೇರೆ ಕಟ್ಟಡ ನಿರ್ಮಾಣವಾದರೆ ಸುಮ್ಮನಿರುವುದಿಲ್ಲ ಎಂದರು.

ಇಷ್ಟೊಂದು ದೊಡ್ಡ ಜಾಗಕ್ಕೆ ನಾವು ನಗರ ಪಾಲಿಕೆಗೆ 1.16 ಕೋಟಿ ತೆರಿಗೆ ಪಾವತಿಸುತ್ತೇವೆ, ವಿದ್ಯುತ್‌ ಬಿಲ್‌ಕೂಡ ನಾವೇ ಕಟ್ಟುತ್ತೇವೆ. ಇವರಿಗೆ ಗಾಲ್ಫ್‌ ಕ್ಲಬ್‌ ನಿರ್ವಹಣೆಗಷ್ಟೇ ವಹಿಸಲಾಗಿದೆ. ಈ ಹಿಂದೆ ಗಾಲ್ಫ್‌ ಕ್ಲಬ್‌ಕೂಡ ನಮ್ಮ ಕ್ಲಬ್‌ ನಿಂದಲೇ ನಿರ್ವಹಿಸಲ್ಪಡುತ್ತಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ವೇಣು, ಜಯರಾಜ ಅರಸ್, ಅಜಿತ್, ಮಣಿ ಇದ್ದರು

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ