ನೀಟ್ ಪರೀಕ್ಷೆ ಅವ್ಯವಹಾರ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

KannadaprabhaNewsNetwork |  
Published : Jun 10, 2024, 12:45 AM IST
ಫೋಟೋಇದೆ. | Kannada Prabha

ಸಾರಾಂಶ

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಈ ಹಗರಣದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್‌ಎಫ್‌ಐ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಪಾರದರ್ಶಕತೆ ಪ್ರಶ್ನಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ದೂರು

ಕನ್ನಡಪ್ರಭ ವಾರ್ತೆ ಹಾವೇರಿ

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಈ ಹಗರಣದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್‌ಎಫ್‌ಐ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಂಬಿಬಿಎಸ್‌, ಬಿಡಿಎಸ್ ಪದವಿ ಹಂತದ ಪ್ರವೇಶ ಪರೀಕ್ಷೆಯಲ್ಲಿ ಸರಿಯಾದ ಉತ್ತರಕ್ಕೆ 4 ಅಂಕಗಳನ್ನು, ಪ್ರತಿ ತಪ್ಪು ಉತ್ತರಕ್ಕೆ 1 ಅಂಕವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಉತ್ತರಿಸದ ಪ್ರಶ್ನೆಗಳನ್ನು ಗುರುತಿಸಿಲ್ಲ. ಆ ಸಂದರ್ಭದಲ್ಲಿ ಗಣಿತದ ಪ್ರಕಾರ 719 ಮತ್ತು 718 ನಂತಹ ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಅಂತಹ ಪ್ರಕರಣಗಳು ಬಂದಿರುವ ಫಲಿತಾಂಶಗಳಲ್ಲಿ ಕಂಡುಬರುತ್ತಿದೆ. ಈ ವರ್ಷದ ಫಲಿತಾಂಶವು ಗ್ರೇಸ್ ಮಾರ್ಕಿಂಗ್‌ಗಾಗಿ ಎಂದು ಎನ್‌ಟಿಎ ಪ್ರಾಸಂಗಿಕವಾಗಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ವರ್ಷ ಪರೀಕ್ಷೆಗೆ ಮುನ್ನ ಎನ್‌ಟಿಎ ಪ್ರಕಟಿಸಿದ ಮಾರ್ಗಸೂಚಿಗಳಲ್ಲಿ ಎಲ್ಲಿಯೂ ಈ ಗ್ರೇಸ್ ಮಾರ್ಕಿಂಗ್ ಯೋಜನೆಯ ಬಗ್ಗೆ ಉಲ್ಲೇಖಸಿಲ್ಲ ಎಂದು ತಿಳಿಸಿದ್ದಾರೆ. ಇದಲ್ಲದೆ, ಒಂದೇ ಕೇಂದ್ರದ ಸತತ ರೋಲ್ ಸಂಖ್ಯೆ ಹೊಂದಿರುವ ಹಲವು ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ. ಆ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಹಾಗೆಯೇ ದೊಡ್ಡ ವಿದ್ಯಾರ್ಥಿ ಸಮುದಾಯವು ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇದು ಒತ್ತಾಯಿಸುತ್ತಿದೆ. ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಗಮನಾರ್ಹವಾದ ಕಡಿತ ಮಾಡುತ್ತಾ ಕಾಲೇಜು ಶುಲ್ಕಗಳನ್ನು ಹೆಚ್ಚಿಸುತ್ತಾ ಹಣವುಳ್ಳವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬ ಖಾಸಗೀಕರಣ ನೀತಿಗಳನ್ನು ಎನ್ಎಂಸಿ ಮತ್ತು ಎನ್‌ಟಿಎ ಸಂಸ್ಥೆಗಳು ಜಂಟಿಯಾಗಿ ಪ್ರೋತ್ಸಾಹಿಸುತ್ತಿವೆ. ಇದು ದೇಶದ ಭವಿಷ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ವರ್ಷ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಸುಮಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಣ ಭರಿಸಲು ಸಾಧ್ಯವಿಲ್ಲದ ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ. ಆದ್ದರಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳು ಕಿತ್ತುಕೊಂಡಂತೆ ಆಗುತ್ತಿದೆ. ಈ ಘಟನೆಗೆ ಸಂಬಂದಿಸಿದಂತೆ ಕೂಡಲೇ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಮಾಡಬೇಕು. ಎನ್‌ಟಿಎಯನ್ನು ರದ್ದುಪಡಿಸಲು ಮತ್ತು ಇಲ್ಲಿಯವರೆಗಿನ ಅದರ ಎಲ್ಲಾ ಹಗರಣಗಳನ್ನು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್. ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ