ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಗ್ರಾಮ ಪಂಚಾಯ್ತಿ ನೌಕರರು, ಜಿಲ್ಲಾ ಪಂಚಾಯ್ತಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಅನುಸೂಚಿತ ಉದ್ದಿಮೆಗೆ ಕನಿಷ್ಠ ವೇತನ ಪರಿಷ್ಕರಿಸಿ ಸರ್ಕಾರ ೨೦೨೨ರ ಜುಲೈ ೨೮ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ಅಧಿಸೂಚನೆಗಳನ್ನು ರದ್ದುಪಡಿಸಿ ರೆಪ್ತಕೋಸ್ ಬ್ರೆಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕನಿಷ್ಠ ವೇತನ ಹೊರಡಿಸುವಂತೆ ನಿರ್ದೇಶಿಸಿದೆ. ಆದರೂ ಸರ್ಕಾರ ಅದನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ಕನಿಷ್ಠ ವೇತನ ಸಲಹಾ ಮಂಡಳಿ ಎರಡು ಬಾರಿ ಸಭೆ ನಡೆಸಿ ಚರ್ಚಿಸಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಕಡತವನ್ನು ಮುಖ್ಯಮತ್ರಿಗಳಿಗೆ ತಲುಪಿಸಿದ ಕಡತ ಅನುಮೋದನೆಗೊಂಡು ಕಾರ್ಮಿಕ ಇಲಾಖೆಗೆ ಕಳುಹಿಸಲಾಗಿದೆ. ಕಾರ್ಮಿಕ ಸಚಿವರು ೨೦೨೬ರ ಮೇ ೨೨ರಂದು ಕನಿಷ್ಠ ವೇತನ ಜಾರಿ ಮಾಡುವಂತೆ ಆದೇಶ ಮಾಡಿದ್ದಾರೆ. ಆದೇಶ ಜಾರಿಯಾಗದಂತೆ ತಡೆಯೊಡ್ಡಲು ಕೆಲವು ಖಾಸಗಿ ಆಡಳಿತ ಮಂಡಳಿಗಳ ಚಟುವಟಿಕೆಯನ್ನು ಗಮನಿಸಿ ಸಂಘ ರಾಜ್ಯದ ಮೂರು ಹೈಕೋರ್ಟ್‌ಗಳಲ್ಲಿ ಪ್ರಕರಣ ದಾಖಲಿಸಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೋರ್ಟ್ ನೋಟೀಸ್ ನೀಡಿ ಚರ್ಚೆ ಆರಂಭವಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳೂ ನಡೆದರೂ ಖಾಸಗಿಯವರ ಷಡ್ಯಂತ್ರದಿಂದಾಗಿ ವೇತನ ಜಾರಿಯಾಗದೆ ಹಾಗೆಯೇ ತಡೆಹಿಡಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೌಕರರ ಸಂಘದ ಅಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಬಸವರಾಜು, ಸಿ.ಕುಮಾರಿ, ನಾಗರಾಜು, ರಮೇಶ್, ನಿಂಗೇಗೌಡ, ಗಿರೀಗೌಡ, ಚಿರಂಜೀವಿ, ಜ್ಯೋತಿ, ಆನಂದ್, ಶೀಲ, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.