ಕಾಲಹರಣ ಮಾಡದೇ ಒಳಮೀಸಲಾತಿ ಜಾರಿಗೆ ಆಗ್ರಹ

KannadaprabhaNewsNetwork | Published : Dec 15, 2024 2:00 AM

ಸಾರಾಂಶ

ಬೆಳಗಾವಿಯಲ್ಲಿ ಜರುಗುವ ಅಧಿವೇಶದಲ್ಲಿ ಒಳಮೀಸಲಾತಿ ಜಾರಿ ಬಗ್ಗೆ ಧ್ವನಿ ಎತ್ತುವಂತೆ ಆಗ್ರಹಿಸಿ ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಕಚೇರಿ ಮುಂದೆ ತಮಟೆ ಚಳವಳಿ ನಡೆಸಲಾಯಿತು.

ಹಾವೇರಿ: ಸುಪ್ರೀಂಕೋರ್ಟ್‌ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೇ ಕಾಲಾಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿ ಹಾಗೂ ಬೆಳಗಾವಿಯಲ್ಲಿ ಜರುಗುವ ಅಧಿವೇಶದಲ್ಲಿ ಈ ಬಗ್ಗೆ ಧ್ವನಿ ಎತ್ತುವಂತೆ ಆಗ್ರಹಿಸಿ ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಕಚೇರಿ ಮುಂದೆ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ಶನಿವಾರ ತಮಟೆ ಚಳವಳಿ ನಡೆಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿ ನಾಲ್ಕು ತಿಂಗಳು ಕಳೆದರೂ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು . ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರದ ಈ ಧೋರಣೆ ಖಂಡಿಸಿ ಡಿ. 16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆಕೊಡಲಾಗಿದೆ ಎಂದು ಹೇಳಿದರು. ಮನವಿಯನ್ನು ಶಾಸಕರ ಆಪ್ತ ಸಹಾಯಕರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಉಡಚ್ಪಪ ಮಾಳಗಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಎಂ. ಆಂಜನೇಯ, ಮಂಜಪ್ಪ ಮರೋಳ, ಕಿಟ್ಟಪ್ಪ ಕರ್ಜಗಿ, ಬಸಣ್ಣ ಮುಗಳಿ, ಅಶೋಕ ಮರೆಣ್ಣನವರ, ನೀಲಮ್ಮ ಪೂಜಾರ, ಮಂಜುನಾಥ ಸಿದ್ದಣ್ಣನವರ ಇತರರು ಇದ್ದರು.

ಒಳ ಮೀಸಲಾತಿ ಜಾರಿಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿ

ಹಾನಗಲ್ಲ: ರಾಜ್ಯ ಮಾದಿಗ ಹಾಗೂ ಮಾದಿಗ ಉಪಜಾತಿಗಳ ಒಳ ಮೀಸಲಾತಿ ಜಾರಿ ಆದೇಶದ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಮಾದಿಗ ಮಹಾಸಭಾ ತಾಲೂಕು ಘಟಕದಿಂದ ಒತ್ತಾಯಿಸಲಾಗಿದೆ.

ಒಳಮೀಸಲಾತಿ ಜಾರಿಗೆ ಕಾಟಾಚಾರಕ್ಕಾಗಿ ಆಯೋಗ ರಚಿಸಿರುವುದನ್ನು ಬಿಟ್ಟು ರಾಜ್ಯ ಸರಕಾರ ಮತ್ತೇನೂ ಮಾಡಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ನೀಡುವ ಭರವಸೆ ನೀಡಿತ್ತು. ಆದರೆ ಈಗ 45 ದಿನಗಳಾದರೂ ಆಯೋಗ ಕೆಲಸ ಆರಂಭಿಸಿಲ್ಲ ಎಂದು ಶನಿವಾರ ಇಲ್ಲಿ ಶಾಸಕರ ಸಹಾಯಕರಿಗೆ ಮನವಿ ಸಲ್ಲಿಸಲಾಗಿದೆ.

ಆಯೋಗಕ್ಕೆ ಅಗತ್ಯದ ಸೌಲಭ್ಯ ಒದಗಿಸಿಲ್ಲ. ಆಯೋಗ ರಚಿಸುವುದು ಮಾದಿಗ ಸಮಾಜದ ಒಳಪಂಗಡಗಳ ಬೇಡಿಕೆ ಇಲ್ಲ. ಸರಕಾರದ ಮುಂದೆ ನ್ಯಾ. ಸದಾಶಿವ ಆಯೋಗದ ಮಾಧುಸ್ವಾಮಿ ಸಮಿತಿ ವರದಿ ಇದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಮಾದಿಗ ಮಹಾಸಭಾ ತಾಲೂಕು ಅಧ್ಯಕ್ಷ ರಾಜು ಹರಿಜನ, ಪದಾಧಿಕಾರಿಗಳಾದ ಚಂದ್ರಪ್ಪ ಹರಿಜನ, ಕೃಷ್ಣ ಹರಿಜನ, ನೀಲಪ್ಪ ಕಟ್ಟಿಮನಿ, ಉಮೇಶ ಮಾಳಗಿ, ನಾಗರಾಜ ಹುಲಗಡ್ಡಿ, ಮುತ್ತು ಕಿರವಾಡಿ, ಕುಮಾರ ಅಕ್ಕಿವಳ್ಳಿ, ಮಹೇಶ ಅಕ್ಕಿವಳ್ಳಿ, ಮಂಜು ನಾಗಣ್ಣನವರ ಇದ್ದರು.

Share this article