ಹಾನಗಲ್ಲ: ಮಾಧುಸ್ವಾಮಿ ಸಮಿತಿಯ ವರದಿಯ ಯಥಾವತ್ ಜಾರಿಗೆ ಆಗ್ರಹಿಸಿ ಬುಧವಾರ ಹಾನಗಲ್ಲ ಪಟ್ಟಣದಲ್ಲಿ ಮಾದಿಗ ಮಹಾಸಭಾ ತಾಲೂಕು ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಗಾಂಧಿ ವೃತ್ತಕ್ಕೆ ಬಂದ ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಮಾದಿಗ ಮಹಾಸಭಾ ಜಿಲ್ಲಾ ಕಾನೂನು ಸಲಹೆಗಾರ ಮಹೇಶ ಹರಿಜನ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿಲ್ಲ. ಕಿಂಚಿತ್ತಾದರೂ ಸಂವಿಧಾನದ ಮೇಲೆ ಗೌರವ ಇದ್ದರೆ ಕೂಡಲೇ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ರೇಣುಕಾ ಎಸ್. ಅವರು ಗಾಂಧಿ ವೃತ್ತಕ್ಕೆ ಬಂದು ಮಾದಿಗ ಮಹಾಸಭಾ ಮನವಿಪತ್ರವನ್ನು ಸ್ವೀಕರಿಸಿದರು.ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಒಳ ಮೀಸಲಾತಿಗೆ ೬ನೇ ಗ್ಯಾರಂಟಿಯಾಗಿ ಆದ್ಯತೆ ನೀಡಿದೆ. ಈಗ ಆ.೧ರಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಳ ಮೀಸಲಾತಿ ಜಾರಿಗೆ ತರಬೇಕು. ಒಳ ಮೀಸಲಾತಿ ಜಾರಿಗೆ ಬರುವ ತನಕ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ತುಂಬಬಾರದು. ಜಾತಿಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್‌ಸಿ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ಹುನ್ನಾರವನ್ನು ಮುಂದುವರಿಸಿದರೆ, ಗಂಭೀರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.