ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

KannadaprabhaNewsNetwork |  
Published : May 26, 2026, 03:00 AM IST
ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಕ್ಷೇತ್ರದಿಂದ ಸಾಲಹಳ್ಳಿ ವರೆಗೆ ರೈತರು ಪಾದಯಾತ್ರೆ ನಡೆಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ರಾಮದುರ್ಗ ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ವೀರಭದ್ರೇಶ್ವರ, ಬಸವೇಶ್ವರ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದಿಂದ ಸರ್ಕಾರ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ವಿರುದ್ಧ ಸೋಮವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಮದುರ್ಗ ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ವೀರಭದ್ರೇಶ್ವರ, ಬಸವೇಶ್ವರ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದಿಂದ ಸರ್ಕಾರ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ವಿರುದ್ಧ ಸೋಮವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿಯ ಬಿಜಾಪೂರ-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಮುಖ್ಯ ವೇದಿಕೆ ನಿರ್ಮಿಸಿದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 9 ಗಂಟೆಗೆ ಗೊಡಚಿ ವೀರಭದ್ರೇಶ್ವರ ಕ್ಷೇತ್ರದಿಂದ ಸಾಲಹಳ್ಳಿಯ ಮುಖ್ಯ ವೇದಿಕೆವರೆಗೆ ಪಾದಯಾತ್ರೆ ನಡೆಸಿ ಮಧ್ಯಾಹ್ನದ ವೇಳೆಗೆ ಬೃಹತ್ ವೇದಿಕೆಯಲ್ಲಿ ಸಮಾವೇಶಗೊಂಡರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಏತ ನೀರಾವರಿ ಯೋಜನೆ ಮುಕ್ತಾಯಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವ ಖಚಿತ ದಿನ ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಬಗ್ಗೆ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಸ್ಥಳಕ್ಕೆ ಆಗಮಿಸಿ ಲಿಖಿತ ಭರವಸೆ ನೀಡಬೇಕು. ತಪ್ಪಿದರೆ ಮಂಗಳವಾರ ರಾಮದುರ್ಗ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುವುದು. ಅಲ್ಲದೇ, ಹೋರಾಟ ತೀವ್ರಗೊಂಡರೆ ಅದಕ್ಕೆ ಶಾಸಕರೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಕಳೆದ ಮೂರು ತಿಂಗಳ ಹಿಂದೆಯೇ ರಾಜ್ಯ ಹೆದ್ದಾರಿ ಬಂದ್ ಮಾಡುವುದಾಗಿ ಹೇಳಲಾಗಿತ್ತು. ಆದರೆ, ರೈತರನ್ನು ಗಂಭೀರವಾಗಿ ಪರಿಗಣಿಸದೇ ದಿಢೀರ್‌ನೆ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಜಿಲ್ಲೆಯ ಹಿರಿಯ ರಾಜಕಾರಣಿಯಾಗಿರುವ ಪಟ್ಟಣರು ಸ್ವಂತ ಚಿಂತನೆ ಮಾಡುವ ವಿವೇಚನೆ ಬೆಳೆಸಿಕೊಳ್ಳಬೇಕು. ಶೀಘ್ರ ನೀರಾವರಿ ಯೋಜನೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಈ ಹೋರಾಟ ಯಾರದೇ ಸ್ವಾರ್ಥಕ್ಕಾಗಿ ಅಲ್ಲ. ರೈತರ ಹಿತಕ್ಕಾಗಿ ನಡೆಯುತ್ತಿದ್ದು, ರೈತರು ಹೋರಾಟದಲ್ಲಿ ರಾಜಕಾರಣಿಗಳು ಒಬ್ಬರು ಅತ್ತಂಗ ಮಾಡುವುದು, ಇನ್ನೊಬ್ಬರು ಸತ್ತಂಗ ಮಾಡುವ ಆಟ ನಮ್ಮಲ್ಲಿ ನಡೆಯಲ್ಲ. ರೈತರ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸುವದಿಲ್ಲ. ಸಂಜೆಯೊಳಗೆ ಶಾಸಕರು ಬರದಿದ್ದರೆ ಮಂಗಳವಾರ ಅವರ ತಿಥಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಎಂ.ಚಂದರಗಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕುಳ್ಳೂರಿನ ಬಸವಾನಂದ ಸ್ವಾಮೀಜಿ, ಹೊಸಕೋಟಿಯ ಅಭಿನವ ರೇವಯ್ಯ ಶಿವಯೋಗಿಗಳು, ಚಿಪ್ಪಲಕಟ್ಟಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಕಟಕೋಳದ ಅಭಿನವ ಸಿದ್ಧರಾಯ ಅಜ್ಜನವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸೇರಿ ಎಲ್ಲ ಮಠಾಧೀಶರು, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವಿ.ಪಾಟೀಲ, ರೈತ ಸಂಘದ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಸೇರಿ ಸಾವಿರಾರು ರೈತರು ಪಾಲ್ಗೊಂಡಿದ್ದರು.

-------

ಕೋಟ್‌

ಚುನಾವಣೆಯಲ್ಲಿ ಹಣ ಪಡೆದು ಮತ ಹಾಕುವುದನ್ನು ಎಲ್ಲರೂ ಬಿಡಬೇಕು. ಕಷ್ಟ ಬಂದಾಗ ಅವರ ಕೊರಳ ಪಟ್ಟಿ ಹಿಡಿದು ಕೇಳಬಹುದು. ನಾವು ಯಾವುದೇ ಬೆದರಿಕೆ ಮತ್ತು ಸೂಟ್‌ಕೇಸ್, ಆಸೆ ಆಮೀಷಗಳಿಗೆ ಬಲಿಯಾಗುವುದಿಲ್ಲ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ದೇಶದಲ್ಲಿ ಐದು ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಂಸದರು, ಶಾಸಕರು ಸುಳ್ಳು ಹೇಳುತ್ತಿದ್ದಾರೆ.

ಶಶಿಕಾಂತ ಗುರೂಜಿ, ರೈತ ಸಂಘದ ಗೌರವಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿನ ಬಿಲ್‌ ಪಾವತಿಗೆ ಆಗ್ರಹಿಸಿ ರೈತರ ಧರಣಿ
ಉಪನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವ