ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಒತ್ತಾಯ: ಗಂಗಾಧರ ಬಡಿಗೇರ

KannadaprabhaNewsNetwork | Published : Dec 12, 2024 12:32 AM

ಸಾರಾಂಶ

ಜ.7ರಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಪ್ರಕಟಿಸಿದ್ದಾರೆ.

ಹಾನಗಲ್ಲ: ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆ 15 ಸಾವಿರ ಮಾಸಿಕ ಗೌರವಧನ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.7ರಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಚಲೋ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ 48 ಸಾವಿರ ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳುವರು ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಪ್ರಕಟಿಸಿದರು.

ಮಂಗಳವಾರ ಹಾನಗಲ್ಲಿನ ಜಗಜೀವನರಾಮ ಭವನದಲ್ಲಿ ಆಯೋಜಿಸಿದ ಆಶಾ ಕಾರ್ಯಕರ್ತೆಯರ ಹಾನಗಲ್ಲ ತಾಲೂಕು ಸಂಘ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯರ್ತೆಯರ ಸಂಘ ಸಂಯುಕ್ತವಾಗಿ ಏರ್ಪಡಿಸಿದ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭಾ ಚುನವಣೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಹೆಗೆ 15 ಸಾವಿರ ರು. ಕೊಡುವುದಾಗಿ ಘೋಷಿಸಿದ ಈ ಸರಕಾರ ಅದನ್ನು ಜಾರಿಗೆ ತರಲಿಲ್ಲ. ನಂಬಿದವರಿಗೆ ಮೋಸ ಮಾಡಿದರು. ಕೊರೋನಾ ಸಂದರ್ಭದಲ್ಲಿ ಪ್ರಾಣದ ಭಯ ಬಿಟ್ಟು ಜನರ ಸೇವೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಅರೋಗ್ಯ ರಾಯಭಾರಿ ಎಂದು ಕರೆದರು. ಆದರೆ ಸೌಲಭ್ಯ ಕೊಡುವಾಗ ಮಾತ್ರ ಕಡೆಗಣಿಸಿದ್ದಾರೆ. ಬಜೆಟ್‌ನಲ್ಲಿ ಕೂಡ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳೂ ಒಂದು ಸಾವಿರ ರು. ಹೆಚ್ಚು ಕೊಡುವುದಾಗಿ ಪ್ರಕಟಿಸಿಯೂ ನೀಡಿಲ್ಲ. ಬಿಟ್ಟಿಯಾಗಿ ಕೆಲಸ ತೆಗೆದುಕೊಳ್ಳುವ ಈ ಸರಕಾರಕ್ಕೆ ಆಶಾ ಕಾರ್ಯಕರ್ತೆಯರ ನೋವು ಅರ್ಥವಾಗುತ್ತಿಲ್ಲ. ಎಲ್ಲವನ್ನೂ ಹೋರಾಟದಿಂದಲೇ ಪಡೆಯುವ ಅನಿವಾರ್ಯತೆ ನಮ್ಮದಾಗಿದೆ. ಈ ಬಾರಿ ಮುಖ್ಯಮಂತ್ರಿಗಳ ಮನೆಗೆ ಹೋದ ಮೇಲೆ ನಮ್ಮ ಬೇಡಿಕೆ ಈಡೇರುವವರೆಗೂ ವಿರಮಿಸುವುದಿಲ್ಲ. ಇದು ಶತಸಿದ್ಧ ಎಂದರು.

ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪುರಮಠ ಮಾತನಾಡಿ, ಆಶಾ ಕಾರ್ಯಕರ್ತೆಯರಿಂದ ಚುನಾವಣೆಯಲ್ಲಿ ಕೆಲಸ ತೆಗೆದುಕೊಂಡರು ಒಂದು ನಯಾಪೈಸೆ ಗೌರವ ಧನ ನೀಡಲಿಲ್ಲ. ಮುಂದಿನ ಚುನಾವಣೆಯನ್ನು ನಾವು ಬಹಿಷ್ಕರಿಸುತ್ತೇವೆ. 32 ಕೆಲಸಕ್ಕಾಗಿ ನಮ್ಮನ್ನು ನೇಮಿಸಿಕೊಂಡರು. ಈಗ 300 ಕೆಲಸ ಹೇಳುತ್ತಾರೆ. ಮೊಬೈಲ್ ನೀಡಿಲ್ಲ. ಮೊಬೈಲ್‌ನಲ್ಲಿ ಕೆಲಸ ಮಾಡಿ ಎನ್ನುತ್ತಾರೆ. 2 ತಾಸಿನ ಕೆಲಸ ಎಂದು ನೇಮಿಸಿಕೊಂಡರು ಈಗ ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸದ ಈ ಸರಕಾರದ ವಿರುದ್ಧ ನಮ್ಮ ಪ್ರತಿಭಟನೆ ಇದೆ. ಆರೋಗ್ಯ ಇಲಾಖೆ ಮೂಲಕ ನಮ್ಮನ್ನು ಹೆದರಿಸುವ ಹುನ್ನಾರ ನಡೆಯದು. ನಾವು ಹೆದರುವುದಿಲ್ಲ. ನಮ್ಮನ್ನು ಯಾರೂ ಕೆಲಸದಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಯಾರಾದರೂ ತೊಂದರೆ ಕೊಟ್ಟರೆ ಕೂಡಲೇ ಸಂಘದ ಗಮನಕ್ಕೆ ತನ್ನಿ ನಾವು ನಿಮ್ಮೊಂದಿಗಿದ್ದೇವೆ ಎಂದರು.

ವೇದಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರತ್ನಾ ಗಿರಣಿ, ತಾಲೂಕು ಅಧ್ಯಕ್ಷೆ ರತ್ನಾ ಮಕರವಳ್ಳಿ, ತಾಲೂಕು ಕಾರ್ಯದರ್ಶಿ ಲಕ್ಷ್ಮಿ ಕಬ್ಬೂರ, ತಾಲೂಕು ಸುಗಮಗಾರರಾದ ಲಕ್ಷ್ಮಿ ಸುಣಗಾರ, ಲಲಿತಾ ಟೋಪಣ್ಣನವರ, ಲೀಲಾವತಿ ಕೋತಿನ, ಗಂಗಮ್ಮ ಹೂಗಾರ, ಗಂಗಮ್ಮ ಮಡಿವಾಳರ, ನಂದಾ ಸೊರಬದ, ಪಾರ್ವತಿ ಹುಲ್ಲಾಳ, ಸೌಭಾಗ್ಯ ಬಾರ್ಕಿ, ವನಜಾಕ್ಷಿ ಇಂಗಳಕಿ, ಶೀಲಾ ಕಟಗಿ, ಸರೋಜಾ ಹೊಂಕಣ ಇದ್ದರು.

Share this article