ಕನಕಗಿರಿ: ಪಟ್ಟಣಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಮಂಡಲ ಬಿಜೆಪಿಯಿಂದ ಇಲ್ಲಿನ ಪಪಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹಿರಿಯ ಮುಖಂಡ ಮಹಾಂತೇಶ ಸಜ್ಜನ್ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ೨೪*೭ ಹೆರಿಗೆ ಸೌಲಭ್ಯವಿದ್ದರೂ ಓರ್ವ ಪ್ರಸೂತಿ ವೈದ್ಯರಿಲ್ಲದಿರುವುದು ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಅಭಿವೃದ್ಧಿ ಇಲ್ಲವಾಗಿದೆ. ಇನ್ನು ಎಸ್‌ಸಿಪಿ, ಎಸ್‌ಟಿಪಿ ಹಣ ದುರ್ಬಳಕೆಯಾಗಿದ್ದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿಲ್ಲ. ಈಗಲಾದರೂ ಕ್ಷೇತ್ರದ ಶಾಸಕರಾಗಿರುವ ತಂಗಡಗಿ ಅವರು ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಆನಂತರ ತಹಸೀಲ್ದಾರ್ ಚಂದ್ರಶೇಖರ ಗಾಳಿ ಹಾಗೂ ಪಪಂ ಪ್ರಭಾರಿ ಮುಖ್ಯಾಧಿಕಾರಿ ರಾಜಶೇಖರ ಮನವಿ ಸ್ವೀಕರಿಸಿದರು.ಪ್ರಮುಖರಾದ ಸಿದ್ರಾಮಗೌಡ ಉಪ್ಪಳ, ರಾಜಾ ಶರಶ್ಚಂದ್ರ ನಾಯಕ, ಗುರುನಗೌಡ, ಅಂಬಣ್ಣ ಹೂಗಾರ, ಪ್ರಕಾಶ ಹಾದಿಮನಿ, ಗ್ಯಾನಪ್ಪ ಗಾಣದಾಳ, ಕನಕಪ್ಪ ಯಾದವ ಗುಡುದೂರು, ಸುರೇಶ ಗುಗ್ಗಳಶೆಟ್ರ, ರಂಗಪ್ಪ ನಾಯಕ, ನರಸಪ್ಪ ಕುರುಗೋಡು, ಶೇಷಪ್ಪ ಪೂಜಾರ, ಅರುಣ್ ಭೂಸನೂರಮಠ, ಲಿಂಗಪ್ಪ ಪೂಜಾರ, ಮಂಜುನಾಥ ಇತರರಿದ್ದರು. ಸಚಿವರೇ ನಿಮ್ಮ ಪತ್ನಿ ಜಿಪಂ ಸದಸ್ಯೆಯಾಗಿದ್ದು ಬಿಜೆಪಿಯಿಂದ: ಬಿಜೆಪಿಯವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳಿರುವ ಸಚಿವ ತಂಗಡಗಿ, ಬಿಜೆಪಿಯಿಂದಲೇ ಬೆಳೆದು ಇದೀಗ ಪ್ರಧಾನಿ ಮೋದಿ ಬಗ್ಗೆ ಟೀಕಿಸುತ್ತಿದ್ದಾರೆ. ಕನಕಗಿರಿ ಕ್ಷೇತ್ರ ಎಸ್‌ಸಿ ಮೀಸಲಾದಾಗ ಇಲ್ಲಿಗೆ ಬಂದು ನೀವು ಯಾವ ಪಕ್ಷದವರು ಎಂದು ಹೇಳಿದ್ದೀರಿ? ಅಲ್ಲದೇ, ಬಲಕುಂದಿ ಜಿಪಂ ಕ್ಷೇತ್ರದಿಂದ ನಿಮ್ಮ ಪತ್ನಿ ಬಿಜೆಪಿಯಿಂದ ಬಿ ಫಾರಂ ಪಡೆದು ಆಯ್ಕೆಯಾಗಿರುವುದು ಮರೆತು ಬಿಜೆಪಿಯನ್ನು ವಿನಾಕಾರಣ ಟೀಕಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನ ನಿಮಗೆ ಪಾಠ ಕಳಿಸುತ್ತಾರೆ ಎಂದು ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ತೀವ್ರ ವಾಗ್ಧಾಳಿ ನಡೆಸಿದರು.