15000 ಕುಟುಂಬಕ್ಕೆ ನಿವೇಶನ ನೀಡಲು ಆಗ್ರಹ

KannadaprabhaNewsNetwork |  
Published : Nov 03, 2026, 02:15 AM IST
ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ನಿವೇಶನ ರಹಿತರ ಆಂದೋಲನ ಹು-ಧಾ ಸಂಘಟನೆಯಿಂದ ಸೋಮವಾರ ಹುಬ್ಬಳ್ಳಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಅವಳಿ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 10ರಿಂದ 15 ಸಾವಿರ ನಿವೇಶನ ರಹಿತ ಕುಟುಂಬಗಳಿವೆ. ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ, ಬಡವರಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಆರ್ಥಿಕವಾಗಿ ದುರ್ಬಲ ಹಾಗೂ ಹಿಂದುಳಿದ ವರ್ಗದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ನಿವೇಶನ ರಹಿತರ ಆಂದೋಲನ ಹು-ಧಾ ಸಂಘಟನೆ ವತಿಯಿಂದ ಸೋಮವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಇಂದಿರಾ ಗ್ಲಾಸ್‌ಹೌಸ್‌ನಿಂದ ಆರಂಭವಾದ ಮೆರವಣಿಗೆ ಹಳೇ ಬಸ್ ನಿಲ್ದಾಣ, ಚೆನ್ನಮ್ಮ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಬಳಿಕ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆದರು.

ಅವಳಿ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 10ರಿಂದ 15 ಸಾವಿರ ನಿವೇಶನ ರಹಿತ ಕುಟುಂಬಗಳಿವೆ. ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ, ಬಡವರಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗೃಹ ನಿರ್ಮಾಣ ಮಂಡಳಿಯ ಯೋಜನೆಗಳು ಹಣವಂತರಿಗೆ ಅನುಕೂಲವಾಗುತ್ತಿವೆಯೇ ಹೊರತು ಬಡವರ ಪಾಲಿಗೆ ಮರೀಚಿಕೆಯಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಜಾಗದಲ್ಲಿ ಅರ್ಹ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿ ಭೂಮಿ ಖರೀದಿಸಿ ಬಡವರಿಗೆ ನಿವೇಶನ ಒದಗಿಸಬೇಕು. ನಿವೇಶನ ರಹಿತರ ಸಮಗ್ರ ಸಮೀಕ್ಷೆ ನಡೆಸಿ, ಅರ್ಹರನ್ನು ಗುರುತಿಸಿ ಅಧಿಕೃತ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಅವಳಿ ನಗರದ ನಿವೇಶನ ರಹಿತರನ್ನು ಒಗ್ಗೂಡಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಸಂಘಟನೆಯ ಸಂಚಾಲಕ ನಾಗರಾಜ ಗುರಿಕಾರ, ಸಹ ಸಂಚಾಲಕ ರಾಜು ಹಿರೇಒಡೆಯರ, ಕಿರಣಸಿಂಗ್ ರಜಪೂತ, ನಾಗರಾಜ ನಾಡಕರ್ಣಿ, ಗುರುನಾಥ ಉಳ್ಳಿಕಾಶಿ, ರಾಜು ಕಲಾಲ, ಎಸ್.ಆರ್. ರಾಯ್ಕರ, ಬಿಬಿಜಾನ ಮುಲ್ಲಾ, ಮಹಾದೇವಿ ಉಮಚಗಿ, ರೇಣುಕಾ ವಾಲ್ಮೀಕಿ, ಪ್ರಕಾಶ ಮೆಹರವಾಡೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಮಾತೆಗೆ ರಾಷ್ಟ್ರಮಾತೆ ಗೌರವ ನೀಡಲು ಆಗ್ರಹ
ನೇಮಕಾತಿಯಲ್ಲಿ ಸಮಾನ ನ್ಯಾಯ ನೀಡಿ