ಕನಕಗಿರಿ ತಾಲೂಕಿನ ಕಾಟಾಪುರ ಖಾಲ್ಸಾ ಕೆರೆಯ ನಾಲೆಯಿಂದ ನೀರು ಸೋರಿಕೆಯಾಗುತ್ತಿದ್ದು, ರೈತರು ಹಾಗೂ ಕುರಿಗಾಹಿಗಳು ಆತಂಕದಲ್ಲಿದ್ದಾರೆ. ಗ್ರಾಮಸ್ಥರು ಮರಳು ಮೂಟೆ ಹಾಕಿ ಸೋರಿಕೆ ತಡೆದರು.
ಕನಕಗಿರಿ: ತಾಲೂಕಿನ ಕಾಟಾಪುರ ಖಾಲ್ಸಾ ಕೆರೆಯ ನಾಲೆಯಿಂದ ನೀರು ಸೋರಿಕೆಯಾಗುತ್ತಿದ್ದು, ರೈತರು ಹಾಗೂ ಕುರಿಗಾಹಿಗಳು ಆತಂಕದಲ್ಲಿದ್ದಾರೆ.
ತಾಲೂಕಿನ ಮಲ್ಲಿಗೆವಾಡ, ನಿರ್ಲೂಟಿ, ಚಿಕ್ಕಖೇಡ, ಹಿರೇಖೇಡ, ಸಿರಿವಾರ, ಗೋಡಿನಾಳ, ಕರಡೋಣ ಸೇರಿದಂತೆ ನಾನಾ ಗ್ರಾಮಗಳಿಗೆ ಜೀವನಾಡಿಯಾಗಿರುವ ಈ ಕೆರೆ ನೀರು ಚಿಕ್ಕ ನಾಲೆಯ ಮೂಲಕ ಎರಡು ದಿನಗಳಿಂದ ಸೋರಿಕೆಯಾಗುತ್ತಿದೆ. ಇದನ್ನು ನೋಡಿದ ಗ್ರಾಮದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಪ್ತ ಸಹಾಯಕ ವೆಂಕಟೇಶ್ ಗೋಡಿನಾಳಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಕೆರೆ ತುರ್ತು ನಾಲೆಯಿಂದ ನೀರು ಪೋಲಾಗುತ್ತಿರುವುದು ಗಮನಿಸಿದ್ದಾರೆ. ಈ ವಿಷಯವನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿಯಲ್ಲಿ ತಿಳಿಸಿ, ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಬೇಕು. ನೀರು ಸೋರಿಕೆ ತಾತ್ಕಾಲಿಕವಾಗಿ ತಡೆಗಟ್ಟಿ, ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಹೊಸ್ ಗೇಟ್ ಅಳವಡಿಸಬೇಕು ಎಂದು ಸೂಚಿಸಿದರು.
ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ, ಸಮಸ್ಯೆ ಅರಿತು ನೀರಿನ ಸೋರಿಕೆ ತಡೆಗೆ ಮುಂದಾದರು. ಮರುಳು ಮೂಟೆಗಳನ್ನು ನಾಲೆಯ ಗೇಟಿಗೆ ತುಂಬಿದ್ದರಿಂದ ಸೋರಿಕೆಯು ತಾತ್ಕಾಲಿಕವಾಗಿ ನಿಂತಿದೆ. ಇದರ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮುದಿಯಪ್ಪ ಮಲ್ಲಿಗೆವಾಡ ಆಗ್ರಹಿಸಿದರು.
ತಾಪಂ ಸದಸ್ಯ ವೆಂಕನಗೌಡ ಪಾಟೀಲ್, ಗ್ರಾಮಸ್ಥರಾದ ಶರಣಗೌಡ, ನಾಗನಗೌಡ, ವೆಂಕಟೇಶ, ಚಾಂದಪಾಷಾ, ಸಣ್ಣ ನೀರಾವರಿ ಇಲಾಖೆಯ ಶರಣಪ್ಪ ಸಂಗನಾಳ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.