ಖಾಲಿ ಹುದ್ದೆ ಭರ್ತಿಗೆ ಒಳ ಮೀಸಲಾತಿ ವರ್ಗೀಕರಣಕ್ಕೆ ಆಗ್ರಹ

KannadaprabhaNewsNetwork |  
Published : Mar 11, 2026, 02:00 AM IST
ರಾಜ್ಯದಲ್ಲಿ ಖಾಲಿ ಇರುವ  56,342 ಹುದ್ದೆಗಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಡಿಸಿ ಕಚೇರಿ  ಎದುರು ಜಿಲ್ಲಾ ಮಾದಿಗ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಖಾಲಿ ಇರುವ 56,342 ಹುದ್ದೆಗಳ ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಮಾದಿಗ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳ್ಳಾರಿ: ರಾಜ್ಯದಲ್ಲಿ ಖಾಲಿ ಇರುವ 56,342 ಹುದ್ದೆಗಳ ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಮಾದಿಗ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಾದಿಗ ಸಮುದಾಯದ ಕಳೆದ ಮೂರುವರೆ ದಶಕಗಳ ನಿರಂತರ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪೂರಕ ನಿರ್ದೇಶನ ನೀಡಿದ್ದು ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿದೆ. ಆದರೆ, 2026ರ ಫೆ. 26 ರ ಸಚಿವ ಸಂಪುಟ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಒಳ ಮೀಸಲಾತಿ ಸಂಬಂಧ ಮಾಡಿರುವ ಆದೇಶಗಳನ್ನು ಅಳವಡಿಕೆ ಮಾಡಿಕೊಳ್ಳದೆ ನೇಮಕಾತಿ ಮುಂದಾಗಿರುವುದು ಮಾದಿಗ ಸಮುದಾಯಕ್ಕೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ. ರಾಜ್ಯದಲ್ಲಿರುವ 56,342 ಖಾಲಿ ಹುದ್ದೆಗಳ ಭರ್ತಿಯನ್ನು ಒಳ ಮೀಸಲಾತಿಯ ಶೇ.15 ರಷ್ಟು ಪರಿಶಿಷ್ಟ ಜಾತಿಯ ಎ,ಬಿ,ಸಿ ಯಂತೆ ಉಪ ವರ್ಗೀಕರಣದಂತೆ ಜಾರಿಗೊಳಿಸಿ, ತಿದ್ದುಪಡಿ ಆದೇಶ ಹೊರಡಿಸಬೇಕು. ಇದಲ್ಲದೆ ಒಟ್ಟು ಮೀಲಾತಿಯ ಪ್ರಮಾಣವನ್ನು ಶೇ. 56ರಿಂದ ಶೇ.50ಕ್ಕೆ ಇಳಿಸಿರುವ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದ ಮುಂದೆ ಸಂವಿಧಾನಾತ್ಮಕ ಹಾಗೂ ಕಾನೂನು ಆಧಾರದ ಮೇಲೆ ಸಮಗ್ರ ಹಾಗೂ ಪ್ರಬಲ ವಾದ ಮಂಡಿಸಬೇಕು. ಮುಖ್ಯವಾಗಿ ಶೇ. 56 ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಂವಿಧಾನ ತಿದ್ದುಪಡಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದೇ ವೇಳೆ ಹೋರಾಟ ಸಮಿತಿಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಒಳ ಮೀಸಲಾತಿಯಲ್ಲಿ ಅನ್ಯಾಯವಾದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಇದಕ್ಕೆ ಸರ್ಕಾರ ಆಸ್ಪದ ಮಾಡಿಕೊಡದ ಶೋಷಿತ ಸಮುದಾಯದ ಹಿತ ಕಾಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಜಿಲ್ಲಾ ಪ್ರಮುಖರಾದ ಕೆ.ಎಂ. ಜಯಗೋಪಾಲ್, ಪಂಪಾಪತಿ ಕುಡಿತಿನಿ, ವೆಂಕಟೇಶ್ ಮೂರ್ತಿ, ರಮೇಶ್ ಗೋನಾಳ್, ನಾಗಭೂಷಣ ಇಂದಿರಾನಗರ, ಕುರುವಳ್ಳಿ ನಾಗರಾಜ್, ಬಾಬು ಕುರುವಳ್ಳಿ, ಭೀಮದಾಸ್, ರಾಮಾಂಜಿನೇಯ, ಶ್ರೀನಿವಾಸ ಚೌದರಿ, ಭಂಡಾರಿ ಶ್ರೀನಿವಾಸ್, ಎ.ಕೆ.ಗಂಗಾಧರ ಸಂಗನಕಲ್ಲು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯ ಸಹಪಾಠಿಗಳ ಮೇಲೆ ದಾಳಿ ಪ್ರಕರಣ: ಬಾಲಕ ಮಾನಸಿಕ ಖಿನ್ನತೆಯೇ ಕಾರಣ?
ಕೆರೆ ತುಂಬಿಸಲು ಅನುದಾನ ನೀಡಿದ್ದು ಕೇಂದ್ರ ಸರ್ಕಾರ