ಕೊಪ್ಪಳ: ನಗರದ ಜಿಲ್ಲಾಡಳಿತ ಭವನದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಸೌಲಭ್ಯಗಳ ವಿಳಂಬ ವಿಲೇವಾರಿ, ಬಾಕಿ ಇರುವ ಶೈಕ್ಷಣಿಕ ಸಹಾಯಧನ ಬಿಡುಗಡೆ, ಕಾರ್ಮಿಕರ ಹೆಸರಿನಲ್ಲಿ ನಡೆಯುತ್ತಿರುವ ಕಿಟ್ ಖರೀದಿ ಅವ್ಯವಹಾರ ತನಿಖೆ, ಜಿಲ್ಲಾ ಎಕ್ಸಿಕ್ಯೂಟಿವ್ ಅಧಿಕಾರಿ ಹೇಮಂತ್ ಸಿಂಗ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿಯಿಂದ ಜಿಲ್ಲಾ ಚುನಾವಣಾ ವಿಭಾಗದ ತಹಸೀಲ್ದಾರ್ ರವಿಕುಮಾರ್ ವಸ್ತ್ರದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಕಾರ್ಮಿಕರು ವಿವಿಧ ಸೌಲಭ್ಯಗಳಿಗಾಗಿ ಸಲ್ಲಿಸಿರುವ ಹೊಸ ಗುರುತಿನ ಚೀಟಿ ಹಾಗೂ ನವೀಕರಣ ಅರ್ಜಿ ತ್ವರಿತವಾಗಿ ವಿಲೇವಾರಿ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಜಿಲ್ಲಾ ಎಕ್ಸಿಕ್ಯೂಟಿವ್ ಅಧಿಕಾರಿ ಹೇಮಂತ್ ಸಿಂಗ್ ಕಾರ್ಯವೈಖರಿ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ,ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಕಾರ್ಮಿಕ ಸಂಘಟನೆ ದುರ್ಬಲಗೊಳಿಸುವ ಹಾಗೂ ಕಾರ್ಮಿಕರಲ್ಲಿ ಗೊಂದಲ ಸೃಷ್ಟಿಸುವ ಚಟುವಟಿಕೆಗಳಲ್ಲಿ ತೊಡಗಿರುವ ಕೊಪ್ಪಳ ಜಿಲ್ಲೆಯ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರವನ್ನು ತಕ್ಷಣ ರದ್ದುಪಡಿಸಬೇಕು. ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಕಿಟ್ ಖರೀದಿ ತಕ್ಷಣ ನಿಲ್ಲಿಸಬೇಕು. ಕರ್ನಾಟಕ ಹೈಕೋರ್ಟ್ ಆದೇಶದಂತೆ ಕಿಟ್ ಮತ್ತು ಸಾಮಗ್ರಿಗಳ ವಿತರಣೆ ಸ್ಥಗಿತಗೊಳಿಸಿ ಅದರ ಬದಲಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ (DBT ಮೂಲಕ) ಹಣ ಜಮಾ ಮಾಡಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ ಹೆಸರಿನಲ್ಲಿ ಸುಮಾರು ₹115 ಕೋಟಿಗೂ ಅಧಿಕ ವೆಚ್ಚದ ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್ ಪ್ರಕ್ರಿಯೆ ತಕ್ಷಣ ರದ್ದುಪಡಿಸಬೇಕು.
ಐದು ವರ್ಷಗಳಿಗಿಂತ ಹೆಚ್ಚು ಕಾಲ ನೋಂದಾಯಿತವಾಗಿರುವ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಕನಿಷ್ಠ ₹5 ಲಕ್ಷ ಸಹಾಯಧನ ನೀಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಟ್ರೇಡ್ ಯೂನಿಯನ್ ಸಂಘಟನೆಗಳ ಮುಖಂಡರು, ಜಿಲ್ಲಾ ಕಾರ್ಮಿಕ ಅಧಿಕಾರಿ ಭಾಗವಹಿಸುವ ಕಟ್ಟಡ ಕಾರ್ಮಿಕರ ಕುಂದುಕೊರತೆ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಬೇಕು ಹಾಗೂ ಸಭೆಯ ನಿರ್ಣಯ ಕಾಲಮಿತಿಯೊಳಗೆ ಜಾರಿಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು ಸಂಯೋಜಿತ) ಜಿಲ್ಲಾಧ್ಯಕ್ಷ ಕಾಸಿಂ ಸರ್ದಾರ್, ಕಟ್ಟಡ ಕಾರ್ಮಿಕರ ಸಂಘಟನೆ (ಐ.ಎಫ್.ಟಿ.ಯು. ಸಂಯೋಜಿತ),ಜಿಲ್ಲಾಧ್ಯಕ್ಷ ತುಕಾರಾಂ ಪಾತ್ರೋಟಿ, ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘ (ಎ.ಐ.ಯು.ಟಿ.ಯು.ಸಿ. ಸಂಯೋಜಿತ), ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐಎಫ್ಟಿಯು) ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಎನ್.ಸಿ.ಎಲ್. ಜಿಲ್ಲಾ ಮುಖಂಡ ಮಹದೇವಪ್ಪ ಮಾವಿನಮಡು, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ, ಮಖಬೂಲ್ ರಾಯಚೂರು, ಆದಿತ್ಯ ಟಿ.ಪಾತ್ರೋಟಿ ಇತರರಿದ್ದರು.