ದೇಶದ ಡಿಜಿಟಲ್ ಕ್ರಾಂತಿ ಮತ್ತು ಅಭಿವೃದ್ಧಿಯ ಯಶಸ್ಸಿನ ಹಿಂದೆ ಭಾರತದ ಯುವಜನರ ಕೊಡುಗೆ ಅಪಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮೂಹವನ್ನು ಕೊಂಡಾಡಿದ್ದಾರೆ. ಸೇವೆ, ನಾವೀನ್ಯತೆ, ಶಿಕ್ಷಣ, ಶಿಸ್ತಿನ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿಸಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದ್ದಾರೆ.
ಮಹೇಂದ್ರ ದೇವನೂರು
ಮೈಸೂರು : ದೇಶದ ಡಿಜಿಟಲ್ ಕ್ರಾಂತಿ ಮತ್ತು ಅಭಿವೃದ್ಧಿಯ ಯಶಸ್ಸಿನ ಹಿಂದೆ ಭಾರತದ ಯುವಜನರ ಕೊಡುಗೆ ಅಪಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮೂಹವನ್ನು ಕೊಂಡಾಡಿದ್ದಾರೆ. ಸೇವೆ, ನಾವೀನ್ಯತೆ, ಶಿಕ್ಷಣ, ಶಿಸ್ತಿನ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿಸಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದ್ದಾರೆ. ಅಲ್ಲದೆ ಸ್ವಾಮಿ ವಿವೇಕಾನಂದರ ಕನಸಿನ ಭಾರತವನ್ನು ನನಸು ಮಾಡುವುದು ಇಂದಿನ ಪೀಳಿಗೆಯ ಹೊಣೆಗಾರಿಕೆ ಎಂದು ಹುರಿದುಂಬಿಸಿದ್ದಾರೆ.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ‘ಎಲ್ಲರಿಗೂ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ, ಮೈಸೂರು ದಸರಾ ಹಾಗೂ ರಾಷ್ಟ್ರಕವಿ ಕುವೆಂಪು ಅವರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಸ್ವಾಮಿ ವಿವೇಕಾನಂದರು ಹಾಗೂ ಕುವೆಂಪುಗೆ ರಾಮಕೃಷ್ಣ ಆಶ್ರಮದೊಂದಿಗೆ ವಿಶೇಷ ನಂಟಿತ್ತು ಎಂದು ಉಲ್ಲೇಖಿಸಿದರು.
ಭಾಷಣದಲ್ಲಿ ಯುವಶಕ್ತಿಯನ್ನೇ ಕೇಂದ್ರವಾಗಿಸಿಕೊಂಡು ಮಾತನಾಡಿದ ಮೋದಿ
ತಮ್ಮ ಭಾಷಣದಲ್ಲಿ ಯುವಶಕ್ತಿಯನ್ನೇ ಕೇಂದ್ರವಾಗಿಸಿಕೊಂಡು ಮಾತನಾಡಿದ ಮೋದಿ, ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಜಾಲತಾಣ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿದೆ. ಶಿಕ್ಷಣ, ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಹೊಸ ಸಾಧನೆ ಮಾಡುತ್ತಿದೆ. ದೇಶದ ಈ ಡಿಜಿಟಲ್ ಕ್ರಾಂತಿ ಮತ್ತು ಅಭಿವೃದ್ಧಿಯ ಯಶಸ್ಸಿನ ಹಿಂದೆ ಭಾರತದ ಯುವಜನರ ಕೊಡುಗೆ ಅಪಾರವಾಗಿದೆ ಎಂದರು.
ಭಾರತವು ಯುವಶಕ್ತಿಯ ಬಲದಿಂದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಚುರುಕಾದ ರಾಷ್ಟ್ರ
ಭಾರತವು ಯುವಶಕ್ತಿಯ ಬಲದಿಂದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಚುರುಕಾದ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದ ಯುವಕರ ಪರಿಶ್ರಮ ಮತ್ತು ಪ್ರತಿಭೆಯಿಂದ ದೇಶವು ವಿಶ್ವದ ಪ್ರಮುಖ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಆರ್ಥಿಕ ಪ್ರಗತಿಯಲ್ಲಿಯೂ ಸಾಕಷ್ಟು ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಯುವಕರಿಗೆ ಸರಿಯಾದ ಅವಕಾಶ ಮತ್ತು ಸರಿಯಾದ ದಿಕ್ಕು ದೊರೆತಾಗ ಅವರ ಸಾಮರ್ಥ್ಯ ಸಂಪೂರ್ಣವಾಗಿ ಹೊರಹೊಮ್ಮುತ್ತದೆ. ಅವರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕಾಗ ಅವರು ತಮ್ಮ ಕನಸುಗಳನ್ನು ನನಸಾಗಿಸುವುದಷ್ಟೇ ಅಲ್ಲ, ರಾಷ್ಟ್ರದ ಅಭಿವೃದ್ಧಿಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆ. ಸ್ವಾಮಿ ವಿವೇಕಾನಂದರು ಯುವಜನರ ಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಪ್ರಮುಖ ಆಧಾರ ಎಂದು ಪರಿಗಣಿಸಿದ್ದರು. ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮ ಯುವಕರನ್ನು ಶಿಕ್ಷಣ, ಕೌಶಲ್ಯ ಮತ್ತು ಶಿಸ್ತಿನ ಮೂಲಕ ಸಬಲಗೊಳಿಸಿ ಪ್ರಗತಿ ಸಾಧಿಸಿರುವುದನ್ನು ಅವರು ಗಮನಿಸಿದ್ದರು. ಅದೇ ರೀತಿ ಭಾರತದ ಯುವಕರೂ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದ್ದಾಗಿ ಹೇಳಿದರು.
ಭಾರತವು ಸ್ವಚ್ಛತಾ ಅಭಿಯಾನದ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಸ್ವಚ್ಛ ಭಾರತ ಅಭಿಯಾನ ದೇಶದಾದ್ಯಂತ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಿದ್ದು, ಅನೇಕ ನಗರಗಳು ಸ್ವಚ್ಛತೆಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿವೆ. ವಿಶೇಷವಾಗಿ ಮೈಸೂರು ನಗರವು ಭಾರತದ ಅತ್ಯಂತ ಸ್ವಚ್ಛ ನಗರಗಳ ಪೈಕಿ ತನ್ನ ಸ್ಥಾನವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ಇತರರಿಗಾಗಿ ಬದುಕುವವರೇ ನಿಜವಾಗಿ ಬದುಕಿರುವವರು’. ಈ ಸಂದೇಶವು ಇಂದೂ ಸಹ ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದೆ.
- ನರೇಂದ್ರ ಮೋದಿ, ಪ್ರಧಾನಿ.
