ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬಣದ ಅಭ್ಯರ್ಥಿ ರಬಿವುಲ್‌ ಆಲಂ ಚೌಧರಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ

ಕೋಲ್ಕತಾ: ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಹೈಡ್ರಾಮಾ ಮುಂದುವರಿದಿದ್ದು, ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬಣದ ಅಭ್ಯರ್ಥಿ ರಬಿವುಲ್‌ ಆಲಂ ಚೌಧರಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಆದರೆ ಅದಾಗಿ ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದ್ದು, ಮತ್ತೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ನಾಟಕೀಯ ಬೆಳವಣಿಗೆ

ಶುಕ್ರವಾರವಷ್ಟೇ ಮಮತಾ ಪಕ್ಷದ ನಂದಿಗ್ರಾಮದ ಅಭ್ಯರ್ಥಿ ಸಂಚಿತಾ ಪ್ರಧಾನ್‌ ಉಮೇದುವಾರಿಕೆಯಿಂದ ಹಿಂದೆ ಸರಿದಿದ್ದರು. ಅದರ ಬೆನ್ನಲ್ಲೇ ಈ ನಾಟಕೀಯ ಬೆಳವಣಿಗೆ ನಡೆದಿದೆ.

ಶನಿವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಚೌಧರಿ, ‘ನಿರಂತರ ಕಿರುಕುಳವನ್ನು ಎದುರಿಸುತ್ತಿರುವ ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸುವುದು ನನಗೆ ಕಷ್ಟವಾಗುತ್ತಿದೆ. ಅಲ್ಲದೆ, ಇಷ್ಟು ಕಡಿಮೆ ಅವಧಿಯಲ್ಲಿ ಮತದಾರರಿಗೆ ಹೊಸ ‘ಫುಟ್‌ಬಾಲ್ ಆಟಗಾರ’ ಚಿಹ್ನೆಯನ್ನು ಪರಿಚಯಿಸುವುದು ಕಷ್ಟ. ಹೀಗಾಗಿ, ಚುನಾವಣೆಗೆ ಸ್ಪರ್ಧಿಸದಿರುವ ನನ್ನ ನಿರ್ಧಾರವನ್ನು ಮಮತಾ ದೀದಿಗೆ ತಿಳಿಸಿದ್ದೇನೆ’ ಎಂದಿದ್ದರು.

ಕೆಲವೇ ಗಂಟೆಗಳಲ್ಲಿ ಉಲ್ಟಾ

ಕೆಲವೇ ಗಂಟೆಗಳಲ್ಲಿ ಉಲ್ಟಾ ಹೊಡೆದಿರುವ ಅವರು, ‘ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಪಕ್ಷದ ವರಿಷ್ಠರು (ಮಮತಾ) ಮಧ್ಯಪ್ರವೇಶಿಸಿದ ನಂತರ, ಪೊಲೀಸರು ನನಗೆ ಭದ್ರತೆಯ ಭರವಸೆ ನೀಡಿದ್ದಾರೆ. ನಾನು ದೀದಿ ಜತೆ ಮಾತನಾಡಿದ್ದೇನೆ. ಅವರು ಚುನಾವಣಾ ಕಣದಿಂದ ಹಿಂದೆ ಸರಿಯದಂತೆ ಸೂಚಿಸಿದ್ದಾರೆ. ಬೆಲ್ದಂಗಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನೂ ಭೇಟಿಯಾಗಿದ್ದೇನೆ. ಪ್ರಚಾರದ ಸಮಯದಲ್ಲಿ ನನಗೂ, ಕಾರ್ಯಕರ್ತರಿಗೂ ಭದ್ರತೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದಿದ್ದಾರೆ.