‘ರಾಜ್ಯದಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ರಚನೆ ಮಾಡುತ್ತೇವೆ. ಇತ್ತೀಚೆಗೆ ಬಂದಿದ್ದ ಕೆ.ಸಿ.ವೇಣುಗೋಪಾಲ್‌, ಸುರ್ಜೇವಾಲ ಅವರೂ ಆದಷ್ಟು ಬೇಗ ಸಮಿತಿ ಮಾಡುವಂತೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ರಾಜ್ಯದಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ರಚನೆ ಮಾಡುತ್ತೇವೆ. ಇತ್ತೀಚೆಗೆ ಬಂದಿದ್ದ ಕೆ.ಸಿ.ವೇಣುಗೋಪಾಲ್‌, ಸುರ್ಜೇವಾಲ ಅವರೂ ಆದಷ್ಟು ಬೇಗ ಸಮಿತಿ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಸದ್ಯದಲ್ಲೇ ರಚನೆಯಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ತಿಳಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ಇದೆ. ರಾಜ್ಯದಲ್ಲೂ ರಚನೆ ಮಾಡಲು ನಾವು ಬದ್ಧರಿದ್ದೇವೆ. ಇತ್ತೀಚೆಗೆ ಬಂದಿದ್ದ ಸುರ್ಜೇವಾಲ, ವೇಣುಗೋಪಾಲ್‌ ಅವರು ಬೇಗ ಮಾಡುವಂತೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾಯಕರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಮಾಡುತ್ತೇವೆ ಎಂದು ಹೇಳಿದರು.

ತುಳು ಭಾಷೆಗೆ ಸ್ಥಾನಮಾನ ರಾಜಕೀಯ ಬೇಡ:

ಬಿಜೆಪಿಯವರು ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜನರ ಭಾವನೆಗಳ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಈಗ ಆಕ್ಷೇಪ ಮಾಡುತ್ತಿರುವವರಿಗೆ ತುಳು ಮತ್ತು ಕೊಡವ ಭಾಷೆಯ ಹಿನ್ನೆಲೆ ಅರಿವಿಲ್ಲ. ನಾನು ಸಂಸತ್ತಿನಲ್ಲಿ ಕೊಡವ ಹಾಗೂ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಚರ್ಚೆ ನಡೆಸಿದ್ದೆ. ಇದೀಗ ನಮ್ಮ ಸರ್ಕಾರ ಮಾಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದರು.