ಡೆನ್ಮಾರ್ಕ್‌ ವ್ಯಾಪ್ತಿಯಲ್ಲಿ ಬರುವ ಅರೆಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಯತ್ನದಲ್ಲಿ ವಿಫಲರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೊನೆಗೂ ಅದರೊಂದಿಗೆ ಸೇನಾ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

- ಡೀಲ್‌ಗೆ ಮುಂದಿನ ವಾರ ಸಹಿ । ಬಳಿಕ ಗ್ರೀನ್‌ಲ್ಯಾಂಡಲ್ಲಿ ಅಮೆರಿಕ ಸೇನಾ ನೆಲೆ ಸ್ಥಾಪನೆ

- ಇಲ್ಲಿ ರಷ್ಯಾ, ಚೀನಾದ ಪ್ರಭಾವ ಕಡಿವಾಣಕ್ಕೆ ಯತ್ನ । ಸದ್ಯ ಡೆನ್ಮಾರ್ಕ್‌ ವಶದಲ್ಲಿರುವ ದೇಶ

ಕೋಪನ್‌ಹೇಗನ್‌: ಡೆನ್ಮಾರ್ಕ್‌ ವ್ಯಾಪ್ತಿಯಲ್ಲಿ ಬರುವ ಅರೆಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಯತ್ನದಲ್ಲಿ ವಿಫಲರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೊನೆಗೂ ಅದರೊಂದಿಗೆ ಸೇನಾ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಸೇನಾ ನೆಲೆ ಸ್ಥಾಪಿಸುವ ಕುರಿತು ಮುಂದಿನ ವಾರ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಟ್ರಂಪ್‌ ಘೋಷಣೆ ಮಾಡಿದ್ದಾರೆ.

ಈ ಮೂಲಕ ಅರ್ಟಿಕ್‌ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಪ್ರಭಾವ ತಡೆಯುವ ದೊಡ್ಡ ಯತ್ನಕ್ಕೆ ಅಮೆರಿಕ ಕೈ ಹಾಕಿದ್ದು, ಇದು ಮತ್ತೊಂದು ಮೂರೂ ದೇಶಗಳ ನಡುವೆ ಸಮರಕ್ಕೆ ಮುನ್ನುಡಿ ಬರೆಯಲಿದೆ ಎಂದು ಹೇಳಲಾಗಿದೆ.

ಏನಿದು ಯೋಜನೆ?:

ಪ್ರಸ್ತಾವಿತ ಒಪ್ಪಂದ ಅನ್ವಯ ಅಂದಾಜು 56000 ಜನಸಂಖ್ಯೆಯ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ತನ್ನ ಸೇನಾ ನೆಲೆ ಸ್ಥಾಪಿಸಲಿದೆ. ಈ ಸಂಬಂಧ ಅಮೆರಿಕ, ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಒಪ್ಪಂದದ ಬಳಿಕ ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ರಕ್ಷಣೆಯ ಹೊಣೆಯನ್ನು ಅಮೆರಿಕ ಸರ್ಕಾರ ಹೊತ್ತುಕೊಳ್ಳಲಿದೆ. ಅಲ್ಲದೆ ನ್ಯಾಟೋಯೇತರ ದೇಶಗಳು ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ನೆಲೆ ಹೊಂದುವುದಕ್ಕೆ ನಿಷೇಧ ಜಾರಿಗೆ ಬರಲಿದೆ. ಅಂದರೆ ಅಲ್ಲಿ ರಷ್ಯಾ ಮತ್ತು ಚೀನಾ ದೇಶಗಳು ತಮ್ಮ ಸೇನಾ ನೆಲೆ ಹೊಂದುವುದನ್ನು ಒಪ್ಪಂದ ನಿಷೇಧಿಸಲಿದೆ. ಉಳಿದಂತೆ ಗ್ರೀನ್‌ಲ್ಯಾಂಡ್‌ ಮೇಲಿನ ಡೆನ್ಮಾರ್ಕ್‌ನ ಉಳಿದ ಎಲ್ಲಾ ಹಕ್ಕುಗಳು ಅದರ ಬಳಿಯೇ ಉಳಿಯಲಿದೆ.

ಅಮೆರಿಕ ಉದ್ದೇಶವೇನು?

ಗ್ರೀನ್‌ಲ್ಯಾಂಡ್‌ನಲ್ಲಿ ಭಾರೀ ಪ್ರಮಾಣದ ರೇರ್‌ ಅರ್ಥ್‌ ಮೆಟಿರಿಯಲ್ಸ್‌, ಅಪರೂಪದ ಖನಿಜ ಮತ್ತು ತೈಲ ಸಂಪತ್ತು ಇದೆ. ಇದರ ಮೇಲೆ ಅಮೆರಿಕ ಕಣ್ಣಿಟ್ಟಿದೆ.

+++

ಅಲ್ಲದೆ ಗ್ರೀನ್‌ಲ್ಯಾಂಡಲ್ಲಿ ವೈರಿ ದೇಶಗಳಾದ ರಷ್ಯಾ, ಚೀನಾದ ಪ್ರಭಾವ ಇದೆ. ಇದಕ್ಕೆ ಕಡಿವಾಣಕ್ಕೆ ಹಾಕಲು ಅಮೆರಿಕ ಯತ್ನಿಸುತ್ತಿದೆ.

ಮುಂದೇನು?:ವಿಶ್ವಸಂಸ್ಥೆಯಲ್ಲಿ ಮೂರೂ ದೇಶಗಳಿಂದ ಒಪ್ಪಂದಕ್ಕೆ ಸಹಿ. ಬಳಿಕ ಇದಕ್ಕೆ ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ಸಂಸತ್ತಿನಲ್ಲಿ ಅನುಮೋದನೆ ಸಿಗಬೇಕು. ಅದು ಆದಲ್ಲಿ ಒಪ್ಪಂದ ಜಾರಿಗೆ ಬರಲಿದೆ.