ರಷ್ಯಾದ ಮೇಲೆ ನಿರ್ಬಂಧ ಹೇರುವ ಮತ್ತು ರಷ್ಯಾದಿಂದ ತೈಲ, ಗ್ಯಾಸ್‌ ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನಾದಂಥ ದೇಶಗಳ ಮೇಲೆ ಶೇ.100ರವರೆಗೆ ತೆರಿಗೆ ವಿಧಿಸಲು ಅವಕಾಶ ನೀಡುವ ಮಹತ್ವದ ವಿಧೇಯಕಕ್ಕೆ ಅಮೆರಿಕ ಸಂಸತ್ತಿನ ಕೆಳಮನೆ ಗುರುವಾರ ಅನುಮೋದನೆ ನೀಡಿದೆ.

ವಾಷಿಂಗ್ಟನ್‌: ರಷ್ಯಾದ ಮೇಲೆ ನಿರ್ಬಂಧ ಹೇರುವ ಮತ್ತು ರಷ್ಯಾದಿಂದ ತೈಲ, ಗ್ಯಾಸ್‌ ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನಾದಂಥ ದೇಶಗಳ ಮೇಲೆ ಶೇ.100ರವರೆಗೆ ತೆರಿಗೆ ವಿಧಿಸಲು ಅವಕಾಶ ನೀಡುವ ಮಹತ್ವದ ವಿಧೇಯಕಕ್ಕೆ ಅಮೆರಿಕ ಸಂಸತ್ತಿನ ಕೆಳಮನೆ ಗುರುವಾರ ಅನುಮೋದನೆ ನೀಡಿದೆ. ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆದಿರುವ ವಿಧೇಯಕ ಇದೀಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಹಿಗೆ ಕಾದಿದೆ. ಅವರು ಸಹಿ ಹಾಕಿದರೆ ಅದು ಕಾಯ್ದೆಯ ಸ್ವರೂಪ ಪಡೆದುಕೊಳ್ಳಲಿದೆ.

ಹೀಗಾಗಿ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಶೇ.100ರಷ್ಟು ಭಾರೀ ಪ್ರಮಾಣದ ತೆರಿಗೆಯ ಆತಂಕ ಎದುರಾಗಿದೆ. ಒಂದು ವೇಳೆ ಈ ಮಸೂದೆಗೆ ಅಧ್ಯಕ್ಷ ಟ್ರಂಪ್‌ ಅವರೇನಾದರೂ ಸಹಿ ಹಾಕಿದರೆ ಅದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೆ ಹದಗೆಡಿಸುವ ಸಾಧ್ಯತೆ ಇದೆ. ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ಬಂದಿರುವಾಗ, ಭಾರತದ ಮೇಲೆ ಟ್ರಂಪ್ ತೆರಿಗೆ ಹೇರುತ್ತಾರಾ ಎಂಬುದು ಸದ್ಯದ ಕುತೂಹಲವಾಗಿದೆ.

ತೆರಿಗೆ ಬೆದರಿಕೆ:

ಭಾರತ, ಚೀನಾದಂಥ ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದೇ ಉಕ್ರೇನ್ ಯುದ್ಧ ವಿಸ್ತರಣೆಯಾಗಲು ಕಾರಣವಾಗುತ್ತಿದೆ. ಈ ದೇಶಗಳು ಯುದ್ಧಕ್ಕೆ ಪರೋಕ್ಷ ಬೆಂಬಲ ಸೂಚಿಸುತ್ತಿವೆ ಎಂದು ಹಿಂದಿನಿಂದಲೂ ಆರೋಪಿಸುತ್ತಲೇ ಬರುತ್ತಿದ್ದ ಅಮೆರಿಕ, ಇದೀಗ ರಷ್ಯಾದ ತೈಲ ಮಾರಾಟಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿಗೆ ಮುಂದಾಗಿದೆ.

ಬೇರೆ ದಾರಿ ಹುಡುಕಿ:

ವಿಧೇಯಕ ಅಂಗೀಕಾರಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ರಿಚರ್ಡ್‌ ಬ್ಲೂಮೆಂಥಲ್‌ ಅವರು, ಭಾರತ ಮತ್ತು ಚೀನಾವು ತೈಲ ಮತ್ತು ಗ್ಯಾಸ್‌ ಖರೀದಿಗೆ ಬೇರೆ ದಾರಿ ಹುಡುಕುವಂತೆ ಸೂಚಿಸಿದ್ದಾರೆ.

ಇಂಧನ ಭದ್ರತೆಗೆ ಬದ್ಧ:

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ನೀಡುವ ಬಿಲ್‌ ಅನ್ನು ಅಮೆರಿಕ ಅಂಗೀಕರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಭಾರತ, ‘ನಮ್ಮ ಆರ್ಥಿಕ ಹಿತಾಸಕ್ತಿ ಹಾಗೂ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ. ಜತೆಗೆ ಈ ರೀತಿಯ ಬೆಳವಣಿಗೆಗಳು ದ್ವಿಪಕ್ಷೀಯ ಸಂಬಂಧದ ಮೇಲಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆ ಮೇಲೆ ಬೀರುವ ಪರಿಣಾಮಗಳ ಕುರಿತು ಸ್ಪಷ್ಟವಾಗಿ ಅಮೆರಿಕದ ಗಮನಕ್ಕೆ ತರಲಾಗುತ್ತದೆ’ ಎಂದು ಹೇಳಿದೆ.

ಅಲ್ಲದೆ, ‘ದೇಶದ 1.4 ಶತಕೋಟಿ ಜನರ ಇಂಧನ ಭದ್ರತೆ, ನಮ್ಮ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ವಿಧೇಯಕ ಅಂಗೀಕಾರಗೊಂಡ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ನಾವು ಪರಿಸ್ಥಿತಿಗನುಗುಣವಾಗಿ ವೈವಿಧ್ಯಮಯ ಮೂಲಗಳ ಮೂಲಕ ಇಂಧನದ ಅಗತ್ಯ ಪೂರೈಸಿಕೊಳ್ಳುವುದನ್ನು ಮುಂದುವರಿಸಲಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಓಲೈಕೆ ಪ್ರಯೋಜನಕ್ಕೆ ಬರಲ್ಲ:

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ.100ರವರೆಗೆ ತೆರಿಗೆ ವಿಧಿಸಲು ಅವಕಾಶ ನೀಡುವ ವಿಧೇಯಕ ಅಮೆರಿಕದಲ್ಲಿ ಅಂಗೀಕಾರಗೊಂಡ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದಿದೆ. ಓಲೈಕೆಯು ಯಾವತ್ತೂ ಫಲ ನೀಡಿಲ್ಲ ಮತ್ತು ನೀಡುವುದೂ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಆರೋಪಿಸಿದ್ದಾರೆ.

ಭಾರತೀಯರ ಇಂಧನ ಭದ್ರತೆ ರಕ್ಷಣೆಗೆ ಬದ್ಧ

ಇಂತಹ ಬೆಳವಣಿಗೆಗಳಿಂದ ದ್ವಿಪಕ್ಷೀಯ ಸಂಬಂಧ ಮಾತ್ರವೇ ಅಲ್ಲ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆ ಮೇಲೂ ಪರಿಣಾಮವಾಗುತ್ತದೆ. ದೇಶದ 1.4 ಶತಕೋಟಿ ಜನರ ಇಂಧನ ಭದ್ರತೆ, ನಮ್ಮ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ.

- ಭಾರತ