ಕನ್ನಡಪ್ರಭ ವಾರ್ತೆ ಮೈಸೂರು:

ಶ್ರೀ ರಾಮಕೃಷ್ಣ ಆಶ್ರಮ ವತಿಯಿಂದ ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕ- ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಉದ್ಘಾಟಿಸಲು ಆ.1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಲಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3.30ಕ್ಕೆ ವಿಶೇಷ ವಿಮಾನ ಮೂಲಕ ಬಂದಿಳಿಯಲಿರುವ ಮೋದಿ ಅವರು, ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಮೈಸೂರು ವಿವಿ ಕ್ರಾಫರ್ಡ್ ಹಾಲ್ ಮುಂಭಾಗದ ಓವೆಲ್ ಮೈದಾನದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ.

ಅಲ್ಲಿಂದ ರಸ್ತೆ ಮೂಲಕ ಹೊರಟು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸುವರು. ನಂತರ ಸಂಜೆ 4.15 ರಿಂದ 4.22 ರವರೆಗೆ ರಾಮಕೃಷ್ಣ ಆಶ್ರಮದ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮಕೃಷ್ಣ ಪರಮಹಂಸರ ಸನ್ನಿಯಲ್ಲಿ ವಿಶೇಷ ಪೂಜೆ ಸಲ್ಲಿಸುವರು. ಸಂಜೆ ನಡೆಯುವ ನಿತ್ಯ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀರಾಮಕೃಷ್ಣರ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವರು.

ಬಳಿಕ ಸಂಜೆ 4.30ಕ್ಕೆ ಶ್ರೀ ರಾಮಕೃಷ್ಣ ವಿದ್ಯಾಶಾಲಾ ಸ್ಟೇಡಿಯಂನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ಮೋದಿ ಅವರು, ಸಾರ್ವಜನಿಕರನ್ನು ಉದ್ದೇಶಿಸಿ 30 ನಿಮಿಷಗಳ ಕಾಲ ಮಾತನಾಡುವರು. ಈ ವೇಳೆ ವಿವೇಕಾನಂದ ಸ್ಮಾರಕ ಉದ್ಘಾಟನೆಯ ಸ್ಮರಣಾರ್ಥ ನಿರ್ಮಿಸಿರುವ ಶಿಲಾಫಲಕವನ್ನು ಅನಾವರಣಗೊಳಿಸುವರು. ಸಂಜೆ 5.30ಕ್ಕೆ ಮೈಸೂರಿನಿಂದ ನಿರ್ಗಮಿಸುವರು.ಗಣ್ಯರು ಭಾಗಿ:ಯಾದವಗಿರಿಯ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ನಡೆಯುವ ಸಾರ್ವಜನಿಕ ಸಭೆಯ ಸಾನ್ನಿಧ್ಯವನ್ನು ಬೇಲೂರು ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ, ಮೈಸೂರು ರಾಮಕೃಷ್ಣ ಆಶ್ರಮ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ವಹಿಸುವರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಕೆ. ಹರೀಶ್‌ ಗೌಡ ಅತಿಥಿಯಾಗಿ ಭಾಗವಹಿಸುವರು.ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 120 ಹೆಚ್ಚು ಸಾಧು, ಸಂತರು ಮತ್ತು ಸನ್ಯಾಸಿಗಳು, ಮಾತಾಜಿಯರು ಮತ್ತು ವಿವಿಧ ಮಠ- ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ 150 ಮಂದಿ ಗಣ್ಯರು, ಸುಮಾರು 6 ಸಾವಿರ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ದಾನಿಗಳು ಹಾಗೂ ಆಹ್ವಾನಿತ ಭಕ್ತರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.ಮೋದಿ ಅವರ ಮೈಸೂರು ಭೇಟಿ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆ.1 ರಂದು ನಗರದ ಪ್ರಮುಖ ರಸ್ತೆಗಳು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭದ್ರತೆಗಾಗಿ ಮಂಡ್ಯ, ಕೋಲಾರ ಸೇರಿದಂತೆ ಇತರೆ ಜಿಲ್ಲೆಗಳಿಂದ ಹೆಚ್ಚುವರಿಯಾಗಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.