ವಸಂತಕುಮಾರ ಕತಗಾಲ
ಈ ಯೋಜನೆಗೆ ಪೂರಕವಾಗಿ ನಿಂತು ಹಾವೇರಿ ಜಿಲ್ಲೆಗೆ ನೀರಿಗಾಗಿ ಉತ್ತರ ಕನ್ನಡವನ್ನು ಬಲಿಕೊಡಲು ಯೋಚಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವ್ಯಾಪಕ ಆಕ್ರೋಶ, ಅಸಮಾಧಾನ ಕೇಳಿಬಂದಿದೆ.
ಜಿಲ್ಲೆಯ ಪರಿಸರವಾದಿಗಳು, ತಜ್ಞರು, ಜನಪ್ರತಿನಿಧಿಗಳು ಸಾರಾಸಗಟಾಗಿ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಯೋಜನೆಯ ವಿರುದ್ಧ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೆ, ನಮ್ಮ ನದಿ ನೀರನ್ನು ಬೇರೆಡೆ ಒಯ್ದು ನೀರಾವರಿ ಯೋಜನೆ ರೂಪಿಸುವುದಕ್ಕಿಂತ ನಮ್ಮ ಜಿಲ್ಲೆಯಲ್ಲೇ ಅಂದರೆ ಬೇಡ್ತಿ (ಗಂಗಾವಳಿ) ನದಿ ತೀರದ ಜನರಿಗೆ ಅನುಕೂಲ ಆಗುವಂತೆ ಪರಿಸರಕ್ಕೆ ಹಾನಿಯಾಗದಂತೆ ಚಿಕ್ಕ ಚಿಕ್ಕ ಯೋಜನೆ ಮೂಲಕ ನೀರಾವರಿ ಕಲ್ಪಿಸಲಿ ಎಂಬ ಆಗ್ರಹವೂ ಸ್ಥಳೀಯರಿಂದ ಕೇಳಿಬಂದಿದೆ.ಈ ಯೋಜನೆಯನ್ನು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಬಹು ಹಿಂದಿನಿಂದಲೇ ವಿರೋಧಿಸುತ್ತಿದ್ದಾರೆ. ಈಚೆಗೆ ಶ್ರೀಗಳ ನೇತೃತ್ವದಲ್ಲೇ ಸಭೆ ನಡೆದು ಯೋಜನೆಯನ್ನು ವಿರೋಧಿಸಲು ತೀರ್ಮಾನಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಅನೇಕ ಯೋಜನೆಗಳಿಂದ ಜಿಲ್ಲೆಗೆ ಅನ್ಯಾಯವಾಗಿದೆ. ಈ ಯೋಜನೆ ಕುರಿತು ಸ್ವರ್ಣವಲ್ಲಿ ಶ್ರೀಗಳು ಹಿಂದಿನಿಂದಲೂ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ನಮ್ಮ ಜಿಲ್ಲೆಯ ಪರಿಸರ, ನೆಲ, ಜಲ ಇತರ ಸ್ಥಿತಿಗತಿ ಕುರಿತು ಚಿಂತನೆ ನಡೆಯಬೇಕಿದೆ. ಈ ಯೋಜನೆ ಬಗ್ಗೆ ನಾನು ತೀವ್ರವಾಗಿ ವಿರೋಧಿಸುತ್ತೇನೆ ಎನ್ನುತ್ತಾರೆ ಶಾಸಕ ಶಿವರಾಮ ಹೆಬ್ಬಾರ್.
ಇದೊಂದು ಅವೈಜ್ಞಾನಿಕ ಯೋಜನೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬೇಡ್ತಿ ಕೊಳ್ಳದಲ್ಲಿ ಹಾಹಾಕಾರ ಸೃಷ್ಟಿಸಲು ಮುಂದಾಗಿದ್ದಾರೆ. ಕಾರವಾರ, ಅಂಕೋಲಾ, ನೌಕಾನೆಲೆ, ಗೋಕರ್ಣ ಹಾಗೂ ನದಿ ತೀರದ ಜನತೆಯ ಜೀವಸೆಲೆಯಾದ ಬೇಡ್ತಿ ನದಿಯನ್ನು ವರದಾ ನದಿಗೆ ಜೋಡಿಸುವ ಯೋಜನೆ ಆಗಲು ಬಿಡುವುದಿಲ್ಲ ಎನ್ನುತ್ತಾರೆ ಪ್ರಾಂತ ರೈತ ಸಂಘದ ಅಧ್ಯಕ್ಷ ಶಾಂತಾರಾಮ ನಾಯಕ.