ಕನ್ನಡಪ್ರಭ ವಾರ್ತೆ ಮೈಸೂರು
ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸರ್ಕಾರ ಬಂದರೂ ಬಡ ಬಗರ್ ಹುಕುಂ ಸಾಗುವಳಿದಾರರನ್ನು ಮರೆತಿವೆ. ಸಾಗುವಳಿ ಪತ್ರ ಇಲ್ಲದೇ ರೈತರು ಸರ್ಕಾರಿ ಸವಲತ್ತು ಪಡೆಯಲು, ಬರ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ರಾಜ್ಯ ಸರ್ಕಾರ ಮುಂದಿನ 8 ತಿಂಗಳ ಒಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಜತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಸಾವಿರಾರು ಎಕರೆ ಜಮೀನು ಪಕ್ಕ ಪೋಡಿಯಾಗದೆ ಹಾಗೆಯೇ ಉಳಿದಿದೆ. ಇದರಿಂದ ರೈತರಿಗೆ ತಮ್ಮ ಮಕ್ಕಳಿಗೆ ಜಮೀನು ವರ್ಗಾಹಿಸಲು, ಅಭಿವೃದ್ಧಿ ಮಾಡಲು ಕಷ್ಟಕರವಾಗಿದೆ. ಆದ್ದರಿಂದ ಜಮೀನುಗಳ ಪೋಡು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದರು.ಬಗರ್ ಹುಕುಂ ಸಾಗುವಳಿದಾರರು ಈಗಾಗಲೇ ಹಕ್ಕು ಪತ್ರಕ್ಕಾಗಿ ಫಾರಂ 51, 53 ಹಾಗೂ 57 ಸಲ್ಲಿಸಿರುವ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಲು ತಾಲೂಕು ಮಟ್ಟದಲ್ಲಿ ಸಮಿತಿ ನೇಮಿಸಬೇಕು. ಸರ್ಕಾರಿ ಜಮೀನು ಖಾಸಗಿಯವರಿಗೆ ಗುತ್ತಿಗೆ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಜಿಎಸ್ ಟಿ ತೆರಿಗೆ ಜಾರಿಯಿಂದ ದೇಶದಲ್ಲಿ ಸುಮರು 9 ಕೋಟಿ ಹಾಲು ಉತ್ಪಾದಕರ ಕುಟುಂಬಗಳೂ ಎರಡು ರೀತಿಯ ತೆರಿಗೆಗಳು ಸೇರಿ ಶೇ. 17ರಿಂದ 30ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಹಾಲಿಗೆ ಜಿಎಸ್ ಟಿ ವಿಧಿಸಿರುವುದರಿಂದ ರೈತ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಹಾಲಿ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.