ಕಂಪ್ಲಿ: ಎಲ್‌ಎಲ್‌ಸಿ ಮತ್ತು ಎಚ್‌ಎಲ್‌ಸಿ ಕಾಲುವೆಗಳಿಗೆ ಕರ್ನಾಟಕ–ಆಂಧ್ರಪ್ರದೇಶದ ಜಂಟಿ ನೀರನ್ನು ತಕ್ಷಣ ಹರಿಸುವಂತೆ ಒತ್ತಾಯಿಸಿ, ಆ.19ರಂದು ತುಂಗಭದ್ರಾ ಜಲಾಶಯದ (ಟಿ.ಬಿ.ಡ್ಯಾಂ) ಸೆಕ್ರೆಟರಿ ಕಚೇರಿಗೆ ಮುತ್ತಿಗೆ ಹಾಕಿ, ರಾಷ್ಟ್ರೀಯ ಹೆದ್ದಾರಿ–50 ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಎಲ್‌ಎಲ್‌ಸಿ–ಎಚ್‌ಎಲ್‌ಸಿ ಕಾಲುವೆಗಳಿಗೆ ಕರ್ನಾಟಕ–ಆಂಧ್ರಪ್ರದೇಶ ಜಂಟಿ ನೀರಿನ 1,800 ಕ್ಯೂಸೆಕ್ ನೀರನ್ನು ಹರಿಸಬೇಕು. ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀನುಗಳಲ್ಲಿ ನಾಟಿ ಮಾಡಿರುವ ಸಸಿ ಮಡಿಗಳು ಒಣಗುತ್ತಿದ್ದು, ಬೆಳೆ ಬೆಳೆಯುವ ಕುರಿತು ರೈತರಲ್ಲಿ ಆತಂಕ ಹೆಚ್ಚಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಂಟಿ ನೀರನ್ನು ಕಾಲುವೆಗಳಿಗೆ ಹರಿಸುವುದಾಗಿ ರೈತರಿಗೆ ಭರವಸೆ ನೀಡಿದ್ದರೂ, ಇದು ವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ದಿನ ಕಳೆದಂತೆ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದು, ರೈತರ ಆತಂಕ ಮತ್ತಷ್ಟು ಹೆಚ್ಚುತ್ತಿದೆ. ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ವಿಳಂಬ ಮಾಡದೆ ಜಂಟಿ ನೀರನ್ನು ಕಾಲುವೆಗಳಿಗೆ ಹರಿಸಬೇಕು ಎಂದು ಒತ್ತಾಯಿಸಿದರು.ಜಲಾಶಯದಲ್ಲಿ ನೀರಿನ ಲಭ್ಯತೆ ಹಾಗೂ ಒಳಹರಿವಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್‌ಎಲ್‌ಸಿ–ಎಚ್‌ಎಲ್‌ಸಿ ಕಾಲುವೆಗಳಿಗೆ ಅಗತ್ಯ ಪ್ರಮಾಣದ ನೀರು ಬಿಡುಗಡೆ ಮಾಡಬೇಕು. ನೀರಿನ ಕೊರತೆಯಿಂದ ರೈತರು ಬೆಳೆ ಹಾನಿಯ ಆತಂಕ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ವಿ. ವೀರೇಶ್, ಎನ್. ತಿಮ್ಮಪ್ಪನಾಯಕ, ಕಾಗೆ ಈರಣ್ಣ, ಚಿನ್ನಬಾಬು, ಶಿವಜಾತ, ಟಿ.ಗಂಗಣ್ಣ, ಕೆ.ಶ್ರೀನಿವಾಸುಲು, ಕೃಷ್ಣಂರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿರುಗುಪ್ಪ: ತಾಲೂಕಿನ ಬಾಗೇವಾಡಿ ಕಾಲುವೆ ಕೆಳಭಾಗದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ತಲುಪದೆ ಬೆಳೆ ಹಾಗೂ ನಾಟಿ ಕಾರ್ಯಕ್ಕೆ ಸಮಸ್ಯೆ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ 180 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕೆಳಭಾಗದ ರೈತರು ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿದರು.ನೀರು ಬಳಕೆದಾರ ಸಂಘದ ಅಧ್ಯಕ್ಷ ಬಂದೇನವಾಜ್ ಮಾತನಾಡಿ, ಸರ್ಕಾರ 90 ದಿನಗಳ ಕಾಲ ನೀರು ಪೂರೈಸುವುದಾಗಿ ತಿಳಿಸಿದ್ದರೂ, ಈಗಾಗಲೇ 10 ದಿನಗಳು ಕಳೆದಿವೆ. ಮೇಲ್ಭಾಗದ ಅನಧಿಕೃತ ನೀರಾವರಿ ಹಾಗೂ ನಾಟಿ ಕಾರ್ಯಗಳಿಂದಾಗಿ ಕೆಳಭಾಗದ ಭಾಗೋಡು ಕಾಲುವೆ ರೈತರಿಗೆ ಹರಿಯಬೇಕಾದ ನೀರು ಸಿಗುತ್ತಿಲ್ಲ. ಪ್ರತಿ ಬಾರಿಯಂತೆ ನಮ್ಮ ಭಾಗಕ್ಕೆ ನ್ಯಾಯಯುತವಾಗಿ ಸಿಗಬೇಕಾದ 180 ಕ್ಯೂಸೆಕ್ ನೀರನ್ನು ತಕ್ಷಣ ಹರಿಸಬೇಕು. ಇಲ್ಲದಿದ್ದರೆ ರೈತರು ಬೆಳೆ ಬೆಳೆಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೇಲ್ಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ನೀರೆತ್ತುವಿಕೆ (ಅನಧಿಕೃತ ಪಂಪ್‌ಸೆಟ್/ಬಳಕೆ) ಯನ್ನು ಕೂಡಲೇ ಬಂದ್ ಮಾಡಿ ಕೆಳಭಾಗದ ಕಾಲುವೆಗೆ ನೀರು ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಹಸೀಲ್ದಾರ್ ಹಾಗೂ ಉನ್ನತಾಧಿಕಾರಿಗಳ ಬಳಿ ಮನವಿ ಮಾಡಲು ಬಂದಾಗ ಸ್ಥಳದಲ್ಲಿ ಅಧಿಕಾರಿಗಳು ಲಭ್ಯವಿಲ್ಲದಿದ್ದರೂ, ಎಂಜಿನಿಯರಿಂಗ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕೇವಲ ಭರವಸೆಯಿಂದ ರೈತರ ಸಂಕಷ್ಟ ತೀರದು. ಆದಷ್ಟು ಬೇಗ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ನೂರಾರು ರೈತರು ಎಚ್ಚರಿಸಿದರು.