ಮನೆಯ ಮುಂದೆ ಒತ್ತುವರಿ ಮಾಡಿದ ಜಾಗದಲ್ಲಿ ತೆಗೆಯಲಾಗಿದ್ದ ಗುಂಡಿಯನ್ನು ಪೊಲೀಸರು ಜೆಸಿಬಿಯಿಂದ ಮುಚ್ಚಿಸಿದರು
ಕನಕಗಿರಿ: ನಿವೇಶನ ವಿಚಾರದಲ್ಲಿ ದೌರ್ಜನ್ಯಕ್ಕೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪಟ್ಟಣದ ೫ನೇ ವಾರ್ಡ್ ನಿವಾಸಿ ಬಸವರಾಜ ರೆಡ್ಡಿ ಅಂತ್ಯಸಂಸ್ಕಾರ ಎಸ್ಪಿ ಡಾ. ರಾಮ್ ಎಲ್.ಅರಸಿದ್ಧಿ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ಸೋಮವಾರ ಇಲ್ಲಿನ ರೆಡ್ಡಿ ಸಮುದಾಯದ ರುದ್ರಭೂಮಿಯಲ್ಲಿ ನಡೆಯಿತು.
ಶನಿವಾರ ವಿಷ ಸೇವಿಸಿದ್ದ ಬಸವರಾಜ ರೆಡ್ಡಿ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಭಾನುವಾರ ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಭಾನುವಾರ ರಾತ್ರಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಬಳಿಕ ಭಾರೀ ಪೊಲೀಸ್ ಭದ್ರತೆಯೊಂದಿಗೆ ಸೋಮವಾರ ಬೆಳಗಿನ ಜಾವ ೩.೩೦ರ ಸುಮಾರಿಗೆ ಪಾರ್ಥಿವ ಶರೀರವನ್ನು ಇಲ್ಲಿನ ಎಪಿಎಂಸಿ ಗೇಟ್ ಬಳಿಯ ಮನೆಗೆ ತರಲಾಯಿತು. ಮನೆಯ ಬಳಿ ನೂರಾರು ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸಂಬಂಧಿಕರ ದುಃಖ ಮುಗಿಲು ಮುಟ್ಟಿತ್ತು.
ಮನೆಯ ಮುಂದೆ ಒತ್ತುವರಿ ಮಾಡಿದ ಜಾಗದಲ್ಲಿ ತೆಗೆಯಲಾಗಿದ್ದ ಗುಂಡಿಯನ್ನು ಪೊಲೀಸರು ಜೆಸಿಬಿಯಿಂದ ಮುಚ್ಚಿಸಿದರು. ಬಳಿಕ ಪಪಂ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು.
ನಂತರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿದಂತೆ ಎಸ್‌ಪಿ, ಹೆಚ್ಚುವರಿ ಎಸ್‌ಪಿ ಹೇಮಂತ್ ಕುಮಾರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಮೃತನ ಮನೆಯಿಂದ ೪ ವಾರ್ಡ್ ವ್ಯಾಪ್ತಿಯ ರೆಡ್ಡಿ ರುದ್ರಭೂಮಿವರೆಗೆ ಅಂತಿಮ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಮುಖಂಡರಾದ ಮನೋಹರಗೌಡ ಹೇರೂರು, ಡಾ.ಬಸವರಾಜ ಕ್ಯಾವಟರ್, ವಿರುಪಾಕ್ಷಪ್ಪ ಸಿಂಗನಾಳ ಇತರರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಶವಯಾತ್ರೆಗೆ ಹೆಗಲು ಕೊಟ್ಟರು.
ನಿವೇಶನ ವಿವಾದದ ಕುರಿತು ಪಪಂ ಹಾಗೂ ಠಾಣೆಗೆ ದೂರು ಸಲ್ಲಿಸಿದ್ದರೂ ನ್ಯಾಯ ಸಿಗದಿದ್ದರಿಂದ ಬಸವರಾಜರೆಡ್ಡಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ. ಪೊಲೀಸರು ಹಣದ ಆಸೆಗೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ. ಅಲ್ಲದೇ, ಶವ ಬಂದ ಮೇಲೆ ಠಾಣೆ ಮುಂದೆ ಇರಿಸಲಾಗುವುದು ಎಂದು ಕುಟುಂಬಸ್ಥರು ಭಾನುವಾರ ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದರು. ಐಜಿ ಪಿ.ಎಸ್.ಹರ್ಷ, ಎಸ್‌ಪಿ ಡಾ.ರಾಮ್ ಎಲ್. ಅರಸಿದ್ಧಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಸಚಿವರಿಂದ ಒತ್ತಡ- ದಢೇಸ್ಗೂರ;ಬಸವರಾಜ ರೆಡ್ಡಿ ನಿವೇಶನ ವಿಚಾರವಾಗಿ ಸಲ್ಲಿಸಿದ ದೂರನ್ನು ದಾಖಲಿಸದಂತೆ ಸಚಿವ ಶಿವರಾಜ ತಂಗಡಗಿ ಮೂರು ದಿನಗಳಿಂದ ಒತ್ತಡ ಹಾಕಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರ ಆರೋಪಿಸಿದರು.
ಅಧಿಕಾರಿಗಳು ಸಚಿವ ತಂಗಡಗಿ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಆರೋಪಿಗಳು ತಂಗಡಗಿಯವರನ್ನು ಭೇಟಿ ಮಾಡಿದ್ದರಿಂದ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಬಿಜೆಪಿ ಹಿರಿಯ ನಾಯಕರು ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದಾರೆ. ಪೊಲೀಸರು ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜನರಿಗಿಂತ ಪೊಲೀಸರೇ ಹೆಚ್ಚು: ಸಾವಿರಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಶವ ಸಂಸ್ಕಾರ ನಡೆದಿರುವುದು ಕನಕಗಿರಿ ಇತಿಹಾಸದಲ್ಲಿ ಇದೇ ಮೊದಲು. ನಗರದ ಎಪಿಎಂಸಿ ೨ನೇ ಗೇಟ್ ಬಳಿಯಿಂದ ಆರಂಭಗೊಂಡ ಬಸವರಾಜರೆಡ್ಡಿ ಅಂತಿಯ ಯಾತ್ರೆಯಲ್ಲಿ ಜನರಿಗಿಂತ ಪೊಲೀಸರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂತು. ಇನ್ನು ಮಸೀದಿ, ಮಂದಿರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆರೋಪಿಗಳ ಬಂಧನವಾಗದಿದ್ದರಿಂದ ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
4ನೇ ಆರೋಪಿ ಬಂಧನ: ಘಟನೆಗೆ ಸಂಬಂಧಿಸಿದಂತೆ ಆ.16ರಂದು ಪ್ರಕರಣದ 4ನೇ ಆರೋಪಿ ಶಹಾಬುದ್ದೀನ್ ಖಾಜಹುಸೇನ ಎಂಬಾತನನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.