ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ತಾಲ್ಲೂಕು ಕುಂಚೇನಹಳ್ಳಿ ಹಾಗೂ ಬೀರನಕೆರೆ ಗ್ರಾಮಗಳ ಸರ್ವೆ ನಂ. 45,43,82,99 ರ ಸುಮಾರು 110 ಕುಟುಂಬಗಳ 200ಕ್ಕೂ ಹೆಚ್ಚು ಎಕರೆ ಸಾಗುವಳಿ ಭೂಮಿ ಗಳಿಗೆ ಹಕ್ಕುಪತ್ರವನ್ನು ವಜಾ ಮಾಡಿರುವುದು ಖಂಡನೀಯ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ಟೀಕಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತ ಬಂದಿವೆ. ಒಂದು ಕಡೆ ಶರಾವತಿ ಸಂತ್ರಸ್ಥರಿಗೆ ಅನ್ಯಾಯವಾದರೆ ಮತ್ತೊಂದು ಕಡೆ ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಸಿಕ್ಕಿಲ್ಲ. ಈಗ ಶಿವಮೊಗ್ಗ ಜಿಲ್ಲೆಯ ಸುಮಾರು 110 ಕುಟುಂಬಗಳ ಜಮೀನುಗಳಿಗೆ ಹಕ್ಕುಪತ್ರ ಹಾಗೂ ಪಹಣಿಯನ್ನು ನೀಡಿದ್ದರೂ ಕೂಡ ಈಗ ಯಾವುದೋ ಉದ್ದೇಶ ಇಟ್ಟುಕೊಂಡು ಹಕ್ಕು ಪತ್ರ ಮತ್ತು ಪಹಣಿಯನ್ನು ವಜಾ ಮಾಡಲಾಗಿದೆ ಎಂದು ದೂರಿದರು.
ಈ ಕುಟುಂಬಗಳು ಇದೇ ಜಮೀನನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬೇರೆ ಎಲ್ಲಿಯೂ ಕೂಡ ಜಮೀನು ಇಲ್ಲ. ಆದ್ದರಿಂದ ಇವರ ಬದುಕು ಈಗ ಬೀದಿಗೆ ಬಿದ್ದಿದೆ. ತಕ್ಷಣವೇ ರದ್ದುಗೊಳಿಸಿರುವ ಪಹಣಿ ಮತ್ತು ಹಕ್ಕುಪತ್ರಗಳನ್ನು ಮತ್ತೇ ಮೊದಲಿನಂತೆ ನೀಡಿ ಸಾಗುವಳಿ ಮಾಡಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಅರಣ್ಯ ಇಲಾಖೆಯವರು ರೈತರಿಗೆ ಸದಾ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆಗಳಂತೆ ಹಾಗೂ ನ್ಯಾಯಾಲಯದ ಆದೇಶದಂತೆಯೇ ಸಾಗುವಳಿದಾರರಿಗೆ ಭೂಮಿಹಕ್ಕನ್ನು ನೀಡಲು ಅವಕಾಶವಿದ್ದರೂ ಕೂಡ ಇದುವರೆಗೂ ಯಾವ ಅಧಿಕಾರಿಗಳೇ ಆಗಲಿ, ರಾಜಕಾರಣಿಗಳಾಗಲಿ ಈ ಬಗ್ಗೆ ಪ್ರಯತ್ನ ಪಡದೇ ಇಚ್ಛಾಶಕ್ತಿ ಪ್ರದರ್ಶಿಸದೇ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಇದೀಗ ಲೋಕಸಭಾ ಅಧಿವೇಶನ ಆರಂಭವಾಗುತ್ತದೆ. ರಾಜ್ಯದ ಸಂಸದರು ಈ ಅಧಿವೇಶನದಲ್ಲಾದರೂ ಶರಾವತಿ ಸಂತ್ರಸ್ಥರ ಹಾಗೂ ಭೂ ಸಾಗುವಳಿದಾರರ ಪರವಾಗಿ ಧ್ವನಿ ಎತ್ತಬೇಕು. ಗಂಭೀರವಾಗಿ ಚರ್ಚಿಸಿ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಶಿವಮೊಗ್ಗ ಜಿಲ್ಲೆಯ ಸಾಗುವಳಿದಾರರ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಾಯಕ, ತೀರ್ಥನಾಯ್ಕ, ಠಾಕ್ಯನಾಯ್ಕ, ವೆಂಕಟೇಶ ನಾಯ್ಕ, ದಶರಥ ನಾಯ್ಕ, ಶಂಕರ ನಾಯ್ಕ, ಬೂದ್ಯನಾಯ್ಕ, ಜಯರಾಮ್ ನಾಯ್ಕ ಮುಂತಾದವರು ಇದ್ದರು.ಬಗರ್‌ಹುಕುಂ ಜಮೀನು ಸಕ್ರಮಗೊಳಿಸಲು ಆಗ್ರಹ
ಶಿವಮೊಗ್ಗ: ಬಗರ್‌ಹುಕುಂ ಜಮೀನನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಬಗರ್‌ಹುಕುಂ ಸಾಗುವಳಿದಾರರು 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ಹಲವು ವರ್ಷಗಳಾದರೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಇದರಿಂದ ಸಾಗುವಳಿದಾರರಿಗೆ ತುಂಬಾ ತೊಂದರೆಯಾಗಿದೆ. ಜಿಲ್ಲಾಧಿಕಾರಿ ಕೂಡಲೇ ಬಗರ್‌ಹುಕುಂ ಕಮಿಟಿ ರಚನೆ ಮಾಡಿ ಹಕ್ಕುಪತ್ರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.ಶಿವಮೊಗ್ಗ ತಾಲೂಕು ಗ್ರಾಪಂಗಳ ವ್ಯಾಪ್ತಿಯಲ್ಲಿ 94ಡಿ ಅಡಿಯಲ್ಲಿ ಸರ್ವೇ ಕೂಡ ಮುಗಿದಿದೆ. ಯಾರೋ ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಹಸೂಡಿ ಗ್ರಾಮದ ಸ.ನಂ. 139ರಲ್ಲಿ 92.20 ಎಕರೆ ಸರ್ಕಾರಿ ಕೆರೆ ಜಮೀನನ್ನು ಒತ್ತುವರಿ ಮಾಡಿರುವ ಬಗ್ಗೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಒತ್ತುವರಿದಾರರು ಜಮೀನು ಬಿಟ್ಟು ಕೊಡಲು ಒಪ್ಪಿದ್ದು ಸರ್ವೇ ಮಾಡಿ ಕೆರೆ ಸುತ್ತ ಟ್ರಂಚ್ ಹಾಕಿಸಿಕೊಡಬೇಕು. ಮತ್ತು ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಸಂಜಯ್ ಕುಮಾರ್, ಪ್ರಮುಖರಾದ ಕೆ. ಸುಂದರ್, ಆರ್ಮುಗಂ, ಕುಬೇಂದ್ರಪ್ಪ ಆನವೇರಿ, ಮೊಹಮ್ಮದ್ ಹುಸೇನ್, ಎಸ್. ಗೀತಾ, ವಿಜಯ, ಧನಭಾಗ್ಯ, ಜಯಕುಮಾರಿ, ಸುರೇಶ್, ಮಂಜುಳಾ ಮತ್ತಿತರರು ಇದ್ದರು.