ಜೋಳ ಬೆಳೆಗಾರರಿಗೆ ನ್ಯಾಯ ದೊರಕಿಸಲು ಒತ್ತಾಯ

KannadaprabhaNewsNetwork |  
Published : Jun 30, 2025, 12:34 AM IST
ಕುರುಗೋಡು ಪಟ್ಟಣದ  ಎಪಿಎಂಸಿಯಲ್ಲಿ ಖರೀದಿಗಾಗಿ ಜೋಳವನ್ನು ಸಂಸ್ಕರಿಸುತ್ತಿರುವ ರೈತರು. | Kannada Prabha

ಸಾರಾಂಶ

ಇಲ್ಲಿನ ಜೋಳ ಖರೀದಿ ಕೇಂದ್ರದಲ್ಲಿ ರೈತರಿಂದ ಜೋಳ ಖರೀದಿಸಲು ಕೇಂದ್ರದ ಅಧಿಕಾರಿ ಪ್ರತಿ ಕ್ವಿಂಟಲ್‌ಗೆ 100 ಗಳಂತೆ ಲಂಚ ಪಡೆಯುವ ಆರೋಪ ಕೇಳಿ ಬಂದಿದೆ.

ಪ್ರತಿ ಕ್ವಿಂಟಲ್‌ಗೆ ₹100 ಗಳಂತೆ ಲಂಚ ಪಡೆಯುವ ಆರೋಪ । ಕ್ರಮಕ್ಕೆ ಕನ್ನಡಪ್ರಭ ವಾರ್ತೆ ಕುರುಗೋಡು

ಇಲ್ಲಿನ ಜೋಳ ಖರೀದಿ ಕೇಂದ್ರದಲ್ಲಿ ರೈತರಿಂದ ಜೋಳ ಖರೀದಿಸಲು ಕೇಂದ್ರದ ಅಧಿಕಾರಿ ಪ್ರತಿ ಕ್ವಿಂಟಲ್‌ಗೆ ₹100 ಗಳಂತೆ ಲಂಚ ಪಡೆಯುವ ಆರೋಪ ಕೇಳಿ ಬಂದಿದೆ. ಹಣ ನೀಡುವವರಿಗೆ ಮೊದಲಿಗೆ ಖರೀದಿಗೆ ಅವಕಾಶ ಮಾಡಿಕೊಡುತ್ತಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು. ಜೋಳ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಆಗಿರುವುದೇನು?:

ಬಳ್ಳಾರಿ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ರೈತರು ಬೆಳದ ಜೋಳವನ್ನು ಬೆಂಬಲ ಬೆಲೆ ಅಡಿ ಸರ್ಕಾರ ಖರೀದಿ ಮಾಡಲು ಕೇಂದ್ರ ತೆರೆದಿದೆ. ಇದರ ಏಜೆನ್ಸಿಯನ್ನು ಕುರುಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀಡಲಾಗಿದೆ. ಸದ್ಯ ಕೇಂದ್ರದಲ್ಲಿ 14500, ಕ್ವಿಂಟಲ್ ನೋಂದಣಿಯಾಗಿದ್ದು, ಈವರೆಗೂ 9020 ಕ್ವಿಂಟಲ್ ಖರೀದಿಸಲಾಗಿದೆ. 5480 ಕ್ವಿಂಟಲ್ ಮಾರಾಟ ಆಗಬೇಕಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಕಟಾವಾಗಿದ್ದ ಜೋಳವನ್ನು ಸಕಾಲಕ್ಕೆ ಫಸಲು ಸರ್ಕಾರ ಖರೀದಿಸದ ಪರಿಣಾಮ ಕೆಲ ರೈತರು ಶೆಡ್ ಮತ್ತು ಗೋದಾಮಿನಲ್ಲಿ ಒಂದೆಡೆ ಸಂಗ್ರಹಿಸಿದ್ದಾರೆ. ಮಳೆ ಹಾಗೂ ಹುಳು ಉಪಟಳದಿಂದ ಜೋಳ ತನ್ನ ಗುಣಮಟ್ಟ ಕಳೆದುಕೊಂಡಿದೆ‌. ಹೀಗಾಗಿ ಅಂಥ ಫಸಲನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಇದರಿಂದ ರೈತರು ಮೂಟೆಯಲ್ಲಿರುವ ಜೋಳವನ್ನು ಮಿಲ್ಲಿನಲ್ಲಿ ಸಂಸ್ಕರಿಸಿ ಮಾರಾಟಕ್ಕೆ ತರುತ್ತಿದ್ದು, ಇದರಿಂದ ರೈತಾಪಿ ವರ್ಗಕ್ಕೆ ಆರ್ಥಿಕ ಹೊರೆಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಇಲ್ಲಿನ ಸಂಘದ ಕಾರ್ಯದರ್ಶಿ ತಿರಸ್ಕೃತ ಜೋಳ ಮಾರಾಟಕ್ಕೆ ರೈತರಿಂದ ಒಂದು ಕ್ವಿಂಟಲ್‌ಗೆ ₹100 ಲಂಚ ಪಡೆಯುತ್ತಿರುವ ಆರೋಪ ರೈತರಿಂದ ಕೇಳಿ ಬಂದಿದೆ. ಇನ್ನೂ ಉತ್ತಮ ಗುಣಮಟ್ಟದ ಜೋಳಕ್ಕೂ ಕೆಲ ರೈತರಿಂದ ₹30 ರಿಂದ 80 ಹಣ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ವಾರ ಪೂರ್ತಿ ಕಾಯುವ ಪರಿಸ್ಥಿತಿ:

ಬೆಳಂಬೆಳಗ್ಗೆ ವಿವಿಧ ವಾಹನ ಮೂಲಕ ಫಸಲು ತುಂಬಿಕೊಂಡು ಬರುವ ಹತ್ತಾರು ರೈತರು ಎಪಿಎಂಸಿಯಲ್ಲಿ ವಾರ ಪೂರ್ತಿ ಕಾಯುವ ಪರಿಸ್ಥಿತಿ ಇದೆ. ಜೋಳದಲ್ಲಿ ಹುಳು ಕಾಣಿಸಿಕೊಂಡರೆ ಅದನ್ನು ಸಂಸ್ಕರಿಸಲು ಚೀಲವೊಂದಕ್ಕೆ ₹16 ನೀಡಿ ರೀ ಪ್ಯಾಕಿಂಗ್ ಮಾಡಿಸಬೇಕಿದೆ.

ಜೋಳ ಖರೀದಿಗೆ ಜೂ. 30 ಕೊನೆಯ ದಿನವಾಗಿದ್ದು ಶೇ.70ರಷ್ಟು ರೈತರು ಈಗಾಗಲೇ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದು ಉಳಿದವರು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು