ಪೌರಕಾರ್ಮಿಕನ ಸಾವಿಗೆ ನ್ಯಾಯ ನೀಡಲು ಆಗ್ರಹ

KannadaprabhaNewsNetwork | Published : Feb 26, 2025 1:04 AM

ಸಾರಾಂಶ

ಪಾವಗಡದ ಪುರಸಭೆ ಪೌರಕಾರ್ಮಿಕ ಮಂಜುನಾಥ್ ರನ್ನು ಅನ್ಯ ಕೆಲಸಕ್ಕೆ ನೇಮಿಸಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಶೀಘ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕು ಎಂದು ಸಫಾಯಿ ಕರ್ಮಚಾರಿ ಆಯೋಗದ ಮೇಲ್ವಿಚಾರಣಾ ಸಮಿತಿ ಸದಸ್ಯ ಕನ್ನಮೇಡಿ ಓಬಳೇಶ್‌ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಫೆ.20ರಂದು ಪುರಸಭೆಯ ಕೆಲಸ ನಿರ್ವಹಿಸುತ್ತಿದ್ದ ವೇಳೆ ಇಲ್ಲಿನ ಪುರಸಭೆಯ ಪೌರಕಾರ್ಮಿಕ ಮಂಜುನಾಥ್ ಮೇಲೆ ಟ್ರಾಕ್ಟರ್‌ ಹರಿದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಹಾಗೂ ತಮಟೆ ಕೂಲಿ ಕಾರ್ಮಿಕರ ಸಂಘ ಹಾಗೂ ಇತರೆ ದಲಿತ ಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಓಬಳೇಶ್‌, ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಪತ್ನಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು. ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಪ್ರಕಾರ ಪೌರಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಅನ್ಯ ಕೆಲಸಗಳಿಗೆ ಬಳಸುವಂತಿಲ್ಲ. ಒಂದು ವೇಳೆ ಆ ರೀತಿ ಅನ್ಯ ಕೆಲಸಗಳನ್ನು ಮಾಡಿಸಿದರೆ ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳ ನೇರ ಹೊಣೆಯಾಗುವ ನಿಯಮವಿದ್ದರೂ ಸಹ ಪಾವಗಡ ಪುರಸಭೆಯ ಆರೋಗ್ಯ ನಿರೀಕ್ಷಕ, ಮುಖ್ಯಾಧಿಕಾರಿಯ ನಿರ್ಲಕ್ಷ್ಯದ ಪರಿಣಾಮ ಮಂಜುನಾಥ್ ಮೃತರಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಮತ್ತು ಸಾವಿಗೆ ಕಾರಣರಾದ ಪೊಲೀಸರ ಮೇಲೆ ಕಾನೂನು ರಿತ್ಯಾ ದೂರು ದಾಖಲಿಸಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಕನ್ನಮೇಡಿ ಕೃಷ್ಣಮೂರ್ತಿ, ಕಡಪಲಕರೆ ಹನಮಂತರಾಯಪ್ಪ, ಪಳವಳ್ಳಿ ಸುಬ್ಬರಾಜ್‌ , ದುಗ್ಯಪ್ಪ, ತಮಟೆ ಕೂಲಿಕಾರರ ಕಾವಲು ಸಮಿತಿಯ ಸಂಚಾಲಕ ಬಳಸಮುದ್ರ ಕೆ.ವೆಂಕಟೇಶ್‌, ಪೊತಗಾನಹಳ್ಳಿಯ ರಾಮಕೃಷ್ಣ, ರಾಯಚೂರು ದೇವಪುತ್ರ, ಮೌನಿಷ್‌ ನಾಗರಾಜು ಹನುಮಕ್ಕ ಜ್ಯೋತಿ, ನಾಗಲಕ್ಷ್ಮೀ, ರಾಮಚಂದ್ರಪ್ಪ ಸೇರಿದಂತೆ ಅನೇಕರಿದ್ದರು.

Share this article