ಕನ್ನಡಪ್ರಭ ವಾರ್ತೆ ಗೋಕಾಕ
ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಮಾಜಿ ಸಂಸದ ರಮೇಶ ಕತ್ತಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿಯ ವಾಲ್ಮೀಕಿ ಸಮುದಾಯದವರು ತಹಸೀಲ್ದಾರ್ ಮುಖಾಂತರ ಪೊಲೀಸ್ ಮಹಾನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಿದರು.ನಗರದ ಬಸವೇಶ್ವರ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ವಾಲ್ಮೀಕಿ ಸಮುದಾಯದವರು, ಕರ್ನಾಟಕ ಭೀಮ ರಕ್ಷಕ ಸಂಘಟನೆ ಹಾಗೂ ದಲಿತ ಪರ ಸಂಘಟನೆಗಳ ಮುಖಂಡರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ, ಧರಣಿ ನಡೆಸಿದರು. ಮಾಜಿ ಸಂಸದ ರಮೇಶ ಕತ್ತಿ ಪ್ರತಿಕೃತಿ ದಹಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ಸಮಾಜದ ಮುಖಂಡರಿಗೆ ಇತರೆ ಸಮುದಾಯದ ಮುಖಂಡರು ಸಾಥ್ ನೀಡಿ ಬೀದಿಗಿಳಿದು ಕತ್ತಿ ಬಂಧನಕ್ಕೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಮುಖಂಡರು, ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಬಿ.ಕೆ.ಮಾಡಲ್ ಸ್ಕೂಲ್ ಆವರಣದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯ ವಿರುದ್ಧ ಜಾತಿ ಬಗ್ಗೆ ಬೇಡರ ಕುರಿತು ಅವಾಚ್ಯ ಪದಗಳಿಂದ ಬೈದು ಅವಮಾನಿಸಿದ್ದಾರೆ. ಮಾಜಿ ಸಂಸದರು ಪದೇ ಪದೇ ದಲಿತರ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಲೆ ಬಂದಿದ್ದಾರೆ. ದಲಿತರ ಮೇಲಿನ ನಿಂದನೆ ಅವರ ಕ್ರೂರ ಮನಸ್ಥಿತಿ ತೋರುತ್ತದೆ. ಸೋಲಿನ ಹತಾಶೆಯಿಂದ ನಿಂದನೆ ಮಾಡುವ ಇಂತವರಿಗೆ ತಕ್ಕ ಶಾಸ್ತಿಯಾಗಬೇಕಿದೆ. ಈ ನಿಂದನೆಯಿಂದ ಜಿಲ್ಲೆಯ ಹಾಗೂ ರಾಜ್ಯದ 60 ಲಕ್ಷ ವಾಲ್ಮೀಕಿ ಸಮುದಾಯದ ಜನರ ಮನಸಿಗೆ ಹಾಗೂ ದಲಿತಪರ ಸಂಘಟನೆಗಳಿಗೆ ತೀವ್ರಘಾಸಿ ಉಂಟು ಮಾಡಿದೆ. ಇದು ಘೋರ ಅಪರಾಧವಾಗಿದ್ದು ಇವರ ಮೇಲೆ ಸೂಕ್ತ ಕಠಿಣ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ.ಪ್ರತಿಭಟನೆಯಲ್ಲಿ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಹನಮಂತ ದುರ್ಗನ್ನವರ, ಭೀಮಶಿ ಭರಮನ್ನವರ, ಬಸವರಾಜ ಸಾಯನ್ನವರ, ಈಶ್ವರ ಗುಡಜ, ದೀಪಕ ಕೋಟಬಾಗಿ, ಅಶೋಕ ಕುಮಾರನಾಯ್ಕ, ಬೋರಪ್ಪ ಬಂಗೆನ್ನವರ, ಗುರುಪಾದ ತವಗೇರಿ, ಸುರೇಶ ಕಾಮೇವಾಡಿ, ಪ್ರಕಾಶ ಕರನಿಂಗ, ವಿನೋದ ಕರನಿಂಗ, ಧನ್ಯಕುಮಾರ ಮೇಗೆರಿ, ಬಸವರಾಜ ಬೇಡರಟ್ಟಿ, ಫಕೀರವ್ವ ನವನಿ, ಮಹಾನಿಂಗ ಬುರಾಣಿ, ರಾಜು ಪಾತ್ರೂಟ, ಮೂದಲಿಂಗ ಗೋರಬಾಳ, ಬಾಳೇಶ ಹುಳಿಸಂಗಟಿ, ಸುನೀಲ ಗಡ್ಡಿಹೊಳಿ, ಗೋವಿಂಗ ಕಳ್ಳಿಮನಿ, ಬೀರಪ್ಪ ಮೈಲನ್ನವರ, ಸಿದ್ದಪ್ಪ ದೇಸಾಯಿ, ಸುನೀತಾ ಕೊಳವಿ, ಸುನೀತಾ ಕೊಣ್ಣೂರ, ರೂಪಾ ಶಾಬಂದರೆ ಸೇರಿದಂತೆ ಅನೇಕರು ಇದ್ದರು.