ಕಂಪ್ಲಿ: ಪಟ್ಟಣದ ಎಲ್ಲ ವ್ಯಾಪಾರಸ್ಥರು ರಾಜ್ಯ ಸರ್ಕಾರದ ನಿಯಮದಂತೆ ತಮ್ಮ ಅಂಗಡಿಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗ್ರಹಿಸಿ, ವಿಜಯ ಕರುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಶನಿವಾರ ಪುರಸಭೆಯ ಜೆಇ ತೇಜಸ್ವಿನಿಗೆ ಮನವಿ ಸಲ್ಲಿಸಿದರು.ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿರುಪಾಕ್ಷಿ ಯಾದವ್ ಮಾತನಾಡಿ, ಪಟ್ಟಣದಲ್ಲಿ ಕೆಲ ವ್ಯಾಪಾರಿಗಳು ಸರ್ಕಾರದ ಆದೇಶವನ್ನು ಲೆಕ್ಕಿಸದೇ ಕನ್ನಡೇತರ ಭಾಷೆಯ ನಾಮಫಲಕಗಳನ್ನು ಅಳವಡಿಸಿರುವುದು ಖಂಡನೀಯ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ವ್ಯಾಪಾರಿಕ ಸಂಸ್ಥೆಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಲೇಬೇಕು. ಕಿರಾಣಿ, ಬಟ್ಟೆ, ಹೋಟೆಲ್, ಮೆಕ್ಯಾನಿಕ್ ಅಂಗಡಿ ಸೇರಿದಂತೆ ಎಲ್ಲ ವ್ಯಾಪಾರಸ್ಥರು ಗ್ರಾಹಕರಿಗೆ ಕನ್ನಡದಲ್ಲೇ ಮಾಹಿತಿ ನೀಡಬೇಕು. ರಸೀದಿ, ಬೆಲೆಪಟ್ಟಿ, ಬೋರ್ಡು ಎಲ್ಲವೂ ಕನ್ನಡದಲ್ಲಿ ಬರೆದಿರಬೇಕು. ಗ್ರಾಹಕರು ತಮ್ಮ ಭಾಷೆಯಲ್ಲಿ ಸೇವೆ ಪಡೆಯಲು ಹಕ್ಕುದಾರರು. ಕನ್ನಡಪರ ಚಳವಳಿಯ ಮೂರು ಬೇಡಿಕೆಗಳನ್ನು ನ.1ರೊಳಗಾಗಿ ಪುರಸಭೆ ಹಾಗೂ ಜಿಲ್ಲಾ ಆಡಳಿತ ಈಡೇರಿಸಬೇಕು. ಇಲ್ಲದಿದ್ದರೆ, ವಿಜಯ ಕರುನಾಡ ರಕ್ಷಣಾ ವೇದಿಕೆ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಜಿಲ್ಲಾ ಅಧ್ಯಕ್ಷೆ ಬಿ. ಮಂಜುಳಾ ಮಾತನಾಡಿ, ಕನ್ನಡ ನಾಮಫಲಕ ಕೇವಲ ಬೋರ್ಡು ಅಲ್ಲ- ಅದು ಭಾಷಾ ಗೌರವದ ಸಂಕೇತ. ಯುವ ಪೀಳಿಗೆಗೆ ಕನ್ನಡದ ಮಹತ್ವವನ್ನು ತಿಳಿಸಲು ವ್ಯಾಪಾರಸ್ಥರ ಸಹಕಾರ ಅಗತ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಗೌರವಾಧ್ಯಕ್ಷ ಎಸ್. ಗೋಪಾಲ ಯಾದವ್, ನಗರ ಅಧ್ಯಕ್ಷ ಕೆ.ಶಬ್ಬೀರ್, ಹಾಗೂ ಪದಾಧಿಕಾರಿಗಳಾದ ಜೆ. ಶಿವಕುಮಾರ್, ಸಂತೋಷ್, ಬಿ. ರಮೇಶ, ಎಂ. ಶಿವಪ್ರಕಾಶ್, ಹುಲಿಗೆಮ್ಮ, ಎನ್. ಗಂಗಮ್ಮ, ಕೆ. ಈರಮ್ಮ, ರೇಣುಕಮ್ಮ, ವೈ. ಯಲ್ಲಪ್ಪ, ಎ. ಪ್ರವೀಣ, ಸಂತೋಷ್ ಕುಮಾರ್ ಸೇರಿದಂತೆ ಇತರರಿದ್ದರು.