ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ದೀಪಾವಳಿ ಹಬ್ಬಕ್ಕೆ ಮೆರುಗು ತಂದು ಕೊಡುವ ಚೆಂಡು ಹೂ ಈ ವರ್ಷ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆದ ಕಾರಣಕ್ಕೆ ಚೆಂಡು ಹೂವಿಗೆ ಡಿಮ್ಯಾಂಡ್ ಬರಲಿದೆ.ದೀಪಾವಳಿ ಬೆಳಕಿನ ಹಬ್ಬದ ಸಡಗರಕ್ಕೆ ಚೆಂಡು ಹೂವಿನ ಚೆಲುವು ಇಮ್ಮಡಿಗೊಳಿಸುತ್ತಿದ್ದು, ಲಕ್ಷ್ಮೀ ಪೂಜೆಗೆ ಬೇಕಾಗಿರುವ ಚೆಂಡು ಹೂ ಕೆಲವೇ ರೈತರು ಬೆಳೆದ ಪರಿಣಾಮ ದರ ಏರಿಕೆಯಾಗಲಿದ್ದು ರೈತರು ಉತ್ತಮ ಆದಾಯ ಗಳಿಸಿದರೆ ಗ್ರಾಹಕರು ಕೈ ಸುಟ್ಟುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ತಾಲೂಕಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಎಕರೆಯ ತೋಟದಲ್ಲಿ ಚೆಂಡು ಹೂಗಳನ್ನು ಬೆಳೆದಿದ್ದು, ಇತ್ತೀಚಿಗೆ ಸುರಿದ ಮಳೆಯಿಂದ ಅಲ್ಪಸ್ವಲ್ಪ ಹಾಳಾಗಿದ್ದು, ಉಳಿದಿರುವ ಹೂಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ರೈತರು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ.ದೀಪಾವಳಿ ಈ ಭಾಗದ ಜನತೆ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಈಗಾಗಲೇ ಪ್ರತಿಯೊಬ್ಬರ ಮನದಲ್ಲೂ ಹಬ್ಬದ ವಾತಾವರಣ ಮೂಡಿದೆ. ಮನೆಗಳಲ್ಲಿ ಅಂಗಡಿಗಳಲ್ಲಿ ಸಿದ್ಧತೆಗಳು ಸಹ ಬಿರುಸಿನಿಂದ ನಡೆದಿವೆ. ಹಬ್ಬದ ಅಲಂಕಾರಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳ ಹೊಲಗಳಲ್ಲಿ ಚೆಂಡು, ಸೇವಂತಿ ಹೂವು ಅರಳಿ ನಿಂತಿದ್ದು ಹೂವಿನ ಕೊಯ್ಲು ನಡೆಸುವ ರೈತರು ತಾವೇ ಮುಸ್ಸಂಜೆ ವೇಳೆಗೆ ಕುಷ್ಟಗಿ, ಇಲಕಲ್, ಗಜೇಂದ್ರಗಡ, ಹುನಗುಂದ ಇನ್ನೂ ಮುಂತಾದ ನಗರಕ್ಕೆ ಮಾರಾಟ ಮಾಡುತ್ತಾರೆ.
ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯದ ಅಂಗವಾಗಿ ಮನೆಗಳು ಮತ್ತು ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸುತ್ತಾರೆ. ವಿಜೃಂಭಣೆಯ ಆಚರಣೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಖರೀದಿಸುವುದು ವಾಡಿಕೆ. ಈ ಬಾರಿ ಕೆಲ ರೈತರು ಮಾತ್ರ ಚೆಂಡು ಹೂ ಬೆಳೆದಿದ್ದು. ಇದುವರೆಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ ₹60–80 ಚೆಂಡು ಹೂವಿನ ಬೆಲೆಯಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಹೂವು ಬರುವ ಸಂಭವ ಇದ್ದು, ಲಾಭದ ನಿರೀಕ್ಷೆ ಹೊಂದಲಾಗಿದೆ ಎಂದು ರೈತರ ಅಭಿಪ್ರಾಯವಾಗಿದೆ.ಅಲಂಕಾರದಲ್ಲಿ ಅಗ್ರಸ್ಥಾನ: ದೀಪಾವಳಿ ಹಬ್ಬದಲ್ಲಿ ಮನೆ ಹಾಗೂ ಅಂಗಡಿಗೆ ಲಕ್ಷ್ಮೀ ಪೂಜೆ, ವಾಹನ ಅಲಂಕಾರಕ್ಕೆ ಚಂಡು ಹೂ ಅಗ್ರಸ್ಥಾನ ಪಡೆದುಕೊಂಡಿದೆ. ಈ ಹೂಗಳನ್ನು ಮಾಲೆಗಳನ್ನಾಗಿ ವಾಹನ, ಅಂಗಡಿ ಮುಂಗಟ್ಟುಗಳಿಗೆ ಬಳಸುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ.
ಕುಷ್ಟಗಿ ತಾಲೂಕಿನಲ್ಲಿ ಸುಮಾರು 50 ಎಕರೆಯ ಪ್ರದೇಶದಲ್ಲಿ ಮಾತ್ರ ಚೆಂಡು ಹೂ ಬೆಳೆಯಲಾಗಿದ್ದು, ರೈತರು ಹೂವಿನ ಕೃಷಿ ಮಾಡಲು ಮುಂದಾಗಬೇಕು, ಇದರಿಂದ ಖರ್ಚು ಕಡಿಮೆ ಆದಾಯ ಉತ್ತಮವಿದೆ ಎಂದು ಕುಷ್ಟಗಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಶಿವಯೋಗಪ್ಪ ತಿಳಿಸಿದ್ದಾರೆ.ಕಳೆದ ವರ್ಷ ಚೆಂಡು ಹೂಗಳನ್ನು ಬಹಳಷ್ಟು ಪ್ರಮಾಣದಲ್ಲಿ ಬೆಳೆಯಲಾಗಿತ್ತು, ಆದರೆ ಈ ವರ್ಷ ಸುರಿದ ಮಳೆಯಿಂದ ಚೆಂಡು ಹೂಗಳು ಹಾಳಾಗಿದ್ದು, ಉಳಿದ ಚೆಂಡು ಹೂಗಳನ್ನು ಮಾತ್ರ ಮಾರಾಟ ಮಾಡಬೇಕಿದ್ದು ಉತ್ತಮ ಆದಾಯವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಚೆಂಡು ಹೂವು ಬೆಳೆಗಾರರಾದ ಮೌನೇಶ ಭಜಂತ್ರಿ, ಮರಿಯಪ್ಪ ಭಜಂತ್ರಿ ಹೇಳಿದ್ದಾರೆ.