ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ತಾಪಂ ಇಒ
ಕನ್ನಡಪ್ರಭ ವಾರ್ತೆ ಮುಂಡಗೋಡಮಹಿಳೆಯರಿಗೆ ನೀಡಿರುವ ಚುನಾವಣೆಗಳ ಮೀಸಲಾತಿ ಬಳಸಿಕೊಂಡು ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಪುರುಷರಿಗೆ ಮಾದರಿಯಾಗುವಂತೆ ಕೆಲಸ ಮಾಡುವ ಮೂಲಕ ಮಹಿಳೆ ಪ್ರಗತಿ ಸಾಧಿಸಬೇಕು ಎಂದು ತಾಲೂಕಾ ಪಂಚಾಯತ್ ಕಾರ್ಯವಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು. ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ನಾಯಕತ್ವ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸೈಬರ್ ಕ್ರೈಂ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ರಾಜಕೀಯ ಕ್ಷೇತ್ರ ಸೂಕ್ತವಲ್ಲ ಎಂದು ಭಾವಿಸದೆ ರಾಜಕೀಯದಲ್ಲಿ ಮುನ್ನುಗ್ಗಿ ದಾಪುಗಾಲು ಇಡಬೇಕು. ದೇಶದ ಶೇ.೨ರಷ್ಟಿರುವ ರಾಜಕಾರಣಿಗಳು ಶೇ.೯೮ರಷ್ಟು ಜನರನ್ನು ಆಳುತ್ತಾರೆ. ರಾಜಕೀಯ ಕ್ಷೇತ್ರದ ಗ್ರಾಪಂ, ತಾಪಂ, ಜಿಪಂ, ಪೌರಾಡಳಿತ ಇಲಾಖೆಗೆ ಸಂಬಂಧಪಟ್ಟ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.೫೦ರಷ್ಟು ಸ್ಥಾನಗಳು ಮೀಸಲಾತಿ ಇರುವುದರಿಂದ ಮಹಿಳೆ ಪುರುಷನಿಗೆ ಸಮಾನವಾಗಿವಾಗಿದ್ದಾಳೆ ಎಂದು ತೋರಿಸಿಕೊಡುತ್ತದೆ. ರಾಜಕೀಯದಲ್ಲಿ ಪಾಲ್ಗೊಂಡು ವಿವಿಧ ಚುನಾವಣೆಗಳನ್ನು ಎದುರುಸಿ ತಮ್ಮ ತಮ್ಮ ಗ್ರಾಮದ ಹೊಬಳಿ ಮಟ್ಟದಲ್ಲಿ ಶಿಕ್ಷಣ ಆರೋಗ್ಯ, ಕೃಷಿ, ತೋಟಗಾರಿಕೆ ಮಾರುಕಟ್ಟೆ, ಆಹಾರ ಭದ್ರತೆ, ಪಡಿತರ ವ್ಯವಸ್ಥೆ, ವಸತಿ ನೀರು ವಿದ್ಯುತ್, ರಸ್ತೆ ಮುಂತಾದ ನಿರ್ಣಾಯಕ ವಿಷಯಗಳ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ನಾಯಕತ್ವ ಬೆಳೆಸಿಕೊಳ್ಳಿ ಎಂದು ಮಹಿಳೆಯರಿಗೆ ಕರೆ ನೀಡಿದರು.ಮುಂಡಗೋಡ ಠಾಣೆ ಸಿಪಿಐ ರಂಗನಾಥ ನಿಲಮ್ಮನವರ ಮಾತನಾಡಿ, ಯಾವುದೇ ಕಂಪನಿ ಮೊಬೈಲ್ ಕರೆಗಳ ಮೂಲಕ ಲಾಟರಿ ಗೆದ್ದಿರುವಿರಿ, ಇಲ್ಲವೇ ಬ್ಯಾಂಕ್ ಹೆಸರು ಹೇಳಿ ನಿಮ್ಮ ಮೋಬೈಲ್ ನಂಬರ್ ಓಟಿಪಿ ತಿಳಿಸಿ ಎಂದು ಕರೆ ಬಂದರೆ, ಅಂತಹ ಕರೆಗಳಿಗೆ ಉತ್ತರಿಸಬಾರದಲ್ಲದೇ ಯಾವುದೆ ವೈಯಕ್ತಿಕ ಮಾಹಿತಿ ನೀಡದಂತೆ ತಿಳಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ್ ಸಂಗಮೇಶ್ವರ ಮಾತನಾಡಿ, ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸುವುದು ತಂಬಾ ಮುಖ್ಯ ಹಾಗೇಯ ಅವರ ರಕ್ಷಣೆ ಕೂಡಾ ಅತಿ ಮುಖ್ಯ ಎಂದರು.ಲೊಯೋಲಾ ವಿಕಾಸ ಕೇಂದ್ರ ನಿರ್ದೇಶಕ ಅನಿಲ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕತ್ವ ಬೆಳೆಸಿಕೊಳ್ಳುವುದು ಹೇಗೆ ಎಂದು ಮಹಿಳೆಯರು ಚಿಂತನೆ ನಡೆಸುವುದು ಅಗತ್ಯವಾಗಿದೆ. ರಾಜಕೀಯ ದಲ್ಲಿ ತೊಡಗುವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು. ಮಲ್ಲಮ್ಮ ನೀರಲಗಿ ನಿರೂಪಿಸಿದರು. ಹಜರತ್ ಮತ್ತು ಸಂಗಡಿಗರು ಜಾಗೃತಿ ಗೀತೆ ಹೇಳಿದರು. ಮಂಗಳಾ ಮೋರೆ ಸ್ವಗತಿಸಿದರು. ಲಕ್ಷ್ಮಣ ಮುಳೆ ವಂದಿಸಿದರು.