- ಮಾಯಕೊಂಡ ಕಾಂಗ್ರೆಸ್ ಮುಖಂಡರ ನಿಯೋಗದಿಂದ ಡಿಕೆಶಿ, ಸಿದ್ದುಗೆ ಮನವಿ - ಎಡಗೈ ಕೋಟಾದಡಿ ಬಸವಂತಪ್ಪಗೆ ಸಚಿವ ಸ್ಥಾನಕ್ಕೆ ಎಚ್.ಆಂಜನೇಯ ಒತ್ತಡ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಗೆ ಮೀಸಲಾದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ, ಮಾದಿಗ ಸಮುದಾಯದ ಮುಖಂಡ ಕೆ.ಎಸ್.ಬಸವಂತಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಕ್ಷೇತ್ರದ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ಭೇಟಿ ಮಾಡಿ, ಚರ್ಚಿಸಿತು.ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮುಖಂಡರ ನಿಯೋಗ, ಮಾಯಕೊಂಡ ಕ್ಷೇತ್ರದ ಜನರ ಮೆಚ್ಚಿನ ಶಾಸಕನಾಗಿ, ಜನರ ನೋವು, ನಲಿವುಗಳಿಗೆ ಕೆ.ಎಸ್.ಬಸವಂತಪ್ಪ ಸ್ಪಂದಿಸುತ್ತಿದ್ದಾರೆ. ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಮತ್ತೊಂದು ಕಡೆ ಶಾಸಕ ಕೆ.ಎಸ್.ಬಸವಂತಪ್ಪ ಸಮೇತರಾಗಿ ಮಾಜಿ ಸಚಿವ ಎಚ್.ಆಂಜನೇಯ ಭೇಟಿ ಮಾಡಿ, ಬಸವಂತಪ್ಪಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.
ಮಾಯಕೊಂಡ ಕ್ಷೇತ್ರದಲ್ಲಿ ‘ಆಂಬ್ಯುಲೆನ್ಸ್ ಬಸವಂತಪ್ಪ’ ಎಂಬ ಹೆಸರಿನಿಂದ ಜನಪ್ರಿಯರಾದವರು ಮಾಯಕೊಂಡ ಶಾಸಕ. ಪ್ರತಿದಿನ ಹತ್ತಾರು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಖುದ್ದಾಗಿ ಆಲಿಸಿ, ಸ್ಥಳದಲ್ಲೇ ಹಲವಾರು ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಶಾಸಕ ಬಸವಂತಪ್ಪ ಮಾಡುತ್ತಿದ್ದಾರೆ. ಹೀಗಾಗಿ, 2ನೇ ಅವಧಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಸವಂತಪ್ಪ ಅವರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ಮನವಿ ಮಾಡಿದರು.
- - -
* ಸಿದ್ದು, ಡಿಕೆಶಿ, ಹೈಕಮಾಂಡ್‌ಗೂ ಒತ್ತಡ ಮತ್ತೊಂದು ಕಡೆ ಮಾಜಿ ಸಚಿವ ಎಚ್.ಆಂಜನೇಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಎಡ ಸಮುದಾಯದ ಕೋಟಾದಡಿ ಒಬ್ಬರಿಗೆ ಸಚಿವ ಸ್ಥಾನವನ್ನು ನೀಡಲಾಗಿದ್ದು, ಮಾದಿಗ ಸಮುದಾಯದ ಇನ್ನೂ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಅವಕಾಶ ಕಲ್ಪಿಸಬೇಕು. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಮಾದಿಗ ಸಮುದಾಯಕ್ಕೆ ಸ್ಥಾನಮಾನ, ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ.
-8ಕೆಡಿವಿಜಿ5: