ಹುಬ್ಬಳ್ಳಿ:
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಆಶಾಳ ಅಡವಿಬಾವಿ ನಿವಾಸಿ ಗದ್ದೆಮ್ಮಾ(52) ಎಂಬುವರು ಪಿತ್ತಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಜ. 31 ರಂದು ಬಾಗಲಕೋಟೆಯಿಂದ ಕೆಎಂಸಿಆರ್‌ಐಗೆ ದಾಖಲಿಸಲಾಗಿತ್ತು. ಕಳೆದ ಶನಿವಾರ ಆಪರೇಷನ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 2.30ಕ್ಕೆ ಮೃತಪಟ್ಟಿದ್ದರು. ಅವರ ದೇಹವನ್ನು ಪ್ಯಾಕ್ ಮಾಡಿಕೊಡಲು ಸಿಬ್ಬಂದಿ ₹500 ಕೇಳಿದ್ದರು ಎನ್ನಲಾಗಿದೆ. ಅಲ್ಲದೆ, ಹಣ ಕೊಟ್ಟರೆ ಮಾತ್ರ ಪ್ಯಾಕ್ ಮಾಡಿ ಕೊಡುತ್ತೇವೆ ಎಂದು ಡಿ ಗ್ರೂಪ್ ಸಿಬ್ಬಂದಿ ಪಟ್ಟು ಹಿಡಿದು ಪೋನ್ ಪೇ ಮೂಲಕ ₹200 ಹಾಕಿಸಿಕೊಂಡಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಕುರಿತು ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಮಾತನಾಡಿ, ಕೆಎಂಸಿಆರ್‌ಐನಲ್ಲಿ ಮಹಿಳೆಯ ದೇಹ ಪ್ಯಾಕ್ ಮಾಡಿಕೊಡಲು ಏಜನ್ಸಿ ಸಿಬ್ಬಂದಿ ಹಣ ಕೇಳಿರುವುದಾಗಿ ಆರೋಪವಿದ್ದು, ಪರಿಶೀಲನೆ ಮಾಡಲಾಗಿದೆ. ಇದಕ್ಕಾಗಿ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಏಜನ್ಸಿ ಹಾಗೂ ಹಣ ತಗೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.