ಬೆಳೆ ನಷ್ಟ ಪರಿಹಾರ ಪರಿಹಾರ ಪಾವತಿಗೆ ಆಗ್ರಹ

KannadaprabhaNewsNetwork |  
Published : Oct 11, 2025, 12:02 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್     | Kannada Prabha

ಸಾರಾಂಶ

ಬೆಳೆನಷ್ಟ ಪರಿಹಾರಕ್ಕೆ ಆಗ್ರಹಿಸಿ ಶುಕ್ರವಾರ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅತಿವೃಷ್ಠಿ ಹಾಗೂ ಅನಾವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರದ ಮೊತ್ತ ಪಾವತಿ ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ಈ ವೇಳೆ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರೈತರು ಬೇಡಿದ ಕುಲವಲ್ಲ.ಜಾತಿ ಹಾಗೂ ಪಕ್ಷಗಳಿಗೆ ಸೇ್ರಿದವರಲ್ಲ. ಸಾಲ ಮಾಡಿ ಕೃಷಿಗೆ ಕೋಟಿಗಟ್ಟಲೆ ಹಣ ಸುರಿದಿದ್ದು ಹವಾಮಾನ ವೈಪರಿತ್ಯದಿಂದಾಗಿ ನಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ವೇಳೆ ರೈತನ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಈರುಳ್ಳಿ ಬೆಳೆ ಅತಿ ಮಳೆಯಿಂದ ನಾಶವಾಗಿದೆ. ಇನ್ನೊಂದು ಕಡೆ ಬೆಳೆಗೆ ಬೆಲೆ ಇಲ್ಲ. ಚಿತ್ರದುರ್ಗ ಜಿಲ್ಲೆ ಬಹಳ ವಿಚಿತ್ರ ಸನ್ನಿವೇಶ ಹೊಂದಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಬೆಳೆ ನಷ್ಟ ಪರಿಹಾರದ ಮಾರ್ಗಸೂಚಿ ಸರಿ ಇಲ್ಲ. ಹೆಕ್ಟರ್ ಒಂದಕ್ಕೆ ಖುಷ್ಕಿ ಭೂಮಿಗೆ 6,800 ರು, ನೀರಾವರಿ ಜಮೀನಿಗೆ 17000, ತೋಟಗಾರಿಕೆ ಬೆಳೆಗಳಿಗೆ 21,000 ನಿಗದಿ ಮಾಡಿದೆ. ಎಲ್ಲಾ ಬೆಳೆಗಳಿಗೂ ಹೆಕ್ಟರ್ ಒಂದಕ್ಕೆ 75 ಸಾವಿರ ನೀಡಬೇಕೆಂಬುದು ನಮ್ಮ ಆಗ್ರಹ. ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ 420 ಸಂಘಟನೆಗಳು ಸೇರಿಕೊಂಡು ಸುದೀರ್ಘ ಪ್ರತಿಭಟನೆ ಮಾಡಿದ್ದರ ಪರಿಣಾಮ ರದ್ದುಪಡಿಸಲಾಗಿದೆ. ಆದದರೆ ಆದರೆ ರಾಜ್ಯ ಸರ್ಕಾರ ಇನ್ನೂ ರದ್ದುಪಡಿಸಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದೇನೆ ಎಂದರು.

ಬೇರೆ ದೇಶಗಳ ಉತ್ಪನ್ನಗಳು ಯಾವುದೇ ತೆರಿಗೆಯಿಲ್ಲದೇ ಆಮದಾಗುತ್ತೇವೆ. ಆ ಉತ್ಪನ್ನಗಳ ಮೇಲೆ ನಮ್ಮ ದೇಶದ ರೈತರು ಸ್ಪರ್ಧೆ ಮಾಡಲು ಆಗುವುದಿಲ್ಲ. ನಮ್ಮ ರೈತರ ಉತ್ಪನ್ನಗಳ ಬೆಲೆ ಕುಸಿದು ಹೋಗುತ್ತಿವೆ. ರೈತರ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡದೇ ಅಲ್ಲಿಂದ ಒಕ್ಕಲೆಬ್ಬಿಸುತ್ತಿದ್ದಾರೆ. ರಾಜ್ಯದಲ್ಲಿ ಅಕ್ರಮ ಸಕ್ರಮ ಸರಿಯಾಗಿ ಜಾರಿಯಾಗುತ್ತಿಲ್ಲ. ಲಂಚ ಕೊಟ್ಟವರಿಗೆ ಮಾತ್ರ ಮಾಡಿಕೊಡುತ್ತಿದ್ದಾರೆ ಎಂದು ಬಸವರಾಜಪ್ಪ ದೂರಿದರು.

ಸರ್ಕಾರ ರೈತರ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದು ಅದೂ ಕೂಡ ಸಮರ್ಪಕವಾಗಿಲ್ಲ. ವಿದ್ಯುತ್ತ್ನು ಹಗಲು ಹೊತ್ತಲ್ಲೇ ನೀಡಬೇಕು.ರೈತರು ಹೊಸದಾಗಿ ಬೋರ್ವೆಲ್ ಕೊರಸಿದರೆ ಅದಕ್ಕೆ ಬೇಕಾದ ಕಂಬಗಳು ಲೈನ್, ಟಿಸಿಯನ್ನು ಅವರೇ ಹಾಕಿಸಿಕೊಳ್ಳುವಂತಹ ಮರಣ ಶಾಸನವನ್ನು ಸರ್ಕಾರ ಜಾರಿಗೆ ತಂದಿದೆ. ಇದನ್ನು ಕೂಡಲೇ ರದ್ದುಪಡಿಸಬೇಕು. ನವೆಂಬರ್ 26 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಸವರಾಜಪ್ಪ ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜನ್ ಮಾತನಾಡಿ, ಸಮಯಕ್ಕೆ ಸರಿಯಾಗಿ ಮಳೆಬಾರದೆ ಶೇಂಗಾ, ರಾಗಿ, ಮೆಕ್ಕೇಜೋಳ, ಈರುಳ್ಳಿ, ಸಾವೆ, ಸಜ್ಜೆ, ನವಣೆ ಇನ್ನು ಮುಂತಾದ ಬೆಳೆಗಳು ಹಾನಿಯಾಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳನ್ನು ಅರ್ಥೈಸದೇ ಕಣ್ಣು ಮುಚ್ಚಿ ಕುಳಿತಿವೆ. ಸೂಕ್ತ ಪರಿಹಾರ ಮತ್ತು ಬೆಳೆ ವಿಮೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್, ಹೊನ್ನೂರು ಮುನಿಯಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಿಟ್ಟೂರು ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ರೈತರಾದ ಮಾರುತಿ, ವಿರೂಪಾಕ್ಷಪ್ಪ, ಕಬ್ಬಿಗೆರೆ ಕಾಂತರಾಜ್, ಬಾಗೇನಾಳ್ ಕೊಟ್ರಬಸಪ್ಪ, ಮರಳುಸಿದ್ದಯ್ಯ, ನಿಂಗಪ್ಪ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಕಾಂತರಾಜ್, ಸಿದ್ದಪ್ಪ, ಜಿ.ಕೆ.ನಾಗರಾಜ್, ಹರಳಯ್ಯ, ಸಿದ್ದಬಸಪ್ಪ, ತಿಪ್ಪೇಸ್ವಾಮಿ, ಗಣೇಶ್, ರಾಮರೆಡ್ಡಿ, ನಿರಂಜನ ಮೂರ್ತಿ ಮಂಜುನಾಥ್, ಮಲ್ಲೇಶಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ